ಉಡುಪಿ ಉಚ್ಚಿಲ ದಸರಾ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆಗೆ ಸನ್ಮಾನ
ಉಡುಪಿ: ನಾಲ್ಕನೇ ವರ್ಷದ ಉಡುಪಿ ದಸರಾ ಮಹೋತ್ಸವ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಶ್ರೀ ಮಹಾಲಕ್ಷ್ಮಿ, ಶ್ರೀ ಶಾರದಾ ಮಾತೆ ಮತ್ತು ನವದುರ್ಗೆಯರ ಕೃಪಾಕಟಾಕ್ಷವೇ ಕಾರಣ. ನಿಸ್ವಾರ್ಥ ಸ್ವಯಂ ಸೇವಕರ ಹಗಲಿರುಳಿನ ಶ್ರಮ, ಜಿಲ್ಲಾ ಪೊಲೀಸರ ಸಮಯೋಚಿತ ಕಾರ್ಯಯೋಜನೆಯಿಂದ ಉಚ್ಚಿಲ ದಸರಾ ನಿರ್ವಿಘ್ನವಾಗಿ ಸಂಪನ್ನಗೊಂಡಿದೆ ಮುಂದೆ ಇನ್ನಷ್ಟು ವೈಭವದಿಂದ ಉಡುಪಿ ಉಚ್ಚಿಲ ದಸರಾ ಮಹೋತ್ಸವ ಮೂಡಿ ಬರಲಿದೆ ಎಂದು ಉಚ್ಚಿಲ ದಸರಾ ರೂವಾರಿ ಡಾ. ಜಿ ಶಂಕರ್ ಹೇಳಿದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ನಡೆದ ನಾಲ್ಕನೇ ವರ್ಷದ ವಿಶ್ವಪ್ರಸಿದ್ದ ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಶ್ರೀಮತಿ ಶಾಲಿನಿ ಡಾ. ಜಿ.ಶಂಕರ್ ತೆರೆದ ಸಭಾಂಗಣದಲ್ಲಿ ನಡೆದ ಗೌರವಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
11 ದಿನಗಳ ಉಚ್ಚಿಲ ದಸರಾ ಮಹೋತ್ಸವದಲ್ಲಿ ಯಶಸ್ಸಿಗಾಗಿ ಅಹರ್ನಿಶಿ ದುಡಿದ ದೇವಳದ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ದಸರಾ ಮಹೋತ್ಸವಕ್ಕೆ ಶ್ರಮಿಸಿದವರನ್ನು, ದಾನಿಗಳನ್ನು ಗೌರವಿಸಲಾಯಿತು.
ದಕ್ಷಿಣ ಕನ್ನದ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರಾ, ದಸರಾ ಸಮಿತಿ ಮಹಿಳಾ ಸಂಚಾಲಕಿ ಸಂದ್ಯಾ ದೀಪ ಸುನಿಲ್, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಉಷಾರಾಣಿ ಬೋಳೂರು, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಕಾಪು ನಾಲ್ಕು ಪಟ್ಣ ಮೊಗವೀರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಗುಣಾ ಎಸ್ ಕರ್ಕೇರಾ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ಸ್ವಾಗತಿಸಿ ವಂದಿಸಿದರು.