
ಉಡುಪಿ: ಎಸ್‌ಐಒ ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ
ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆಯ ಬೇಡಿಕೆಗಳನ್ನು ಸೇರಿಸುವ ನಿಟ್ಟಿನಲ್ಲಿ ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ವಿದ್ಯಾರ್ಥಿ ಪ್ರಣಾಳಿಕೆ ಹೊರತಂದಿದ್ದು ಜಾರಿಗೆ ಹಕ್ಕೊತ್ತಾಯ ಮಾಡುತ್ತಿದೆ ಎಂದು ಎಸ್‌ಐಒ ರಾಜ್ಯ ಕಾರ್ಯದರ್ಶಿ ಬಿ.ಅಫ್ವನ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಖಾತ್ರಿ ಪಡಿಸಿರುವ ಶಿಕ್ಷಣದ ಹಕ್ಕನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು, ಶಾಲಾ ಪೂರ್ವ ಶಿಕ್ಷಣದ ಮೂಲಕ ಮಕ್ಕಳ ಅಪೌಷ್ಟಿಕತೆ ನಿವಾರಿಸಿ ಅಂಗನವಾಡಿಗಳನ್ನು ಸಶಕ್ತಗೊಳಿಸಬೇಕು, ಶಾಲೆಯಿಂದ ಹೊರಗುಳಿದ ಮಕ್ಕಳ ಮರು ದಾಖಲಾತಿ ಖಚಿತಪಡಿಸಬೇಕು, ವಿದ್ಯಾರ್ಥಿವೇತನ, ಸಮವಸ್ತ್ರ, ಶಿಕ್ಷಕರ ಹುದ್ದೆಗಳ ಭರ್ತಿ, ಬಜೆಟ್‌ನಲ್ಲಿ ರಾಜ್ಯದ ಜಿಡಿಪಿಯ ಶೇ 6ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಎನ್‌ಇಪಿ ಪ್ರಸ್ತಾಪದಂತ ವಿದೇಶಿ ಖಾಸಗಿ ವಿವಿಗಳನ್ನು ಭಾರತದಲ್ಲಿ ತೆರೆಯುವ ಬದಲು ದೇಶದಲ್ಲಿರುವ ವಿಶ್ವವಿದ್ಯಾಲಯಗಳ ಗುಣಮಟ್ಟ ಹೆಚ್ಚಿಸಬೇಕು, ವಿದೇಶಿ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಬೇಕು, ಕಾಲೇಜುಗಳಲ್ಲಿ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿ ಮಾಡಬೇಕು, ಕ್ಯಾಂಪಸ್‌ಗಳಲ್ಲಿ ಜಾತಿ ಧರ್ಮದ ನಿಂದನೆ, ತಾರತಮ್ಯ ನಿವಾರಿಸಿ ಸಾಮರಸ್ಯದ ವಾತಾವರಣ ನಿರ್ಮಾಣ ಮಾಡಬೇಕು, ಮಾನವ ಸಂಪನ್ಮೂಲಗಳ ಗರಿಷ್ಠ ಸದ್ಬಳಕೆಯ ಮೂಲಕ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಉಡುಪಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಿಸಬೇಕು, ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ಅಗತ್ಯವಿರುವೆಡೆ ಓವರ್ ಪಾಸ್ ನಿರ್ಮಾಣ, ಸರ್ಕಾರಿ ಹಾಗೂ ಖಾಸಗಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಅನುವಾಗುವಂತೆ ಕಾಮನ್ ಬಸ್ ಪಾಸ್ ಸೌಲಭ್ಯ ಕೊಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಐಒ ಜಿಲ್ಲಾಧ್ಯಕ್ಷ ಅಯಾನ್ ಮಲ್ಪೆ, ಮಾಧ್ಯಮ ಕಾರ್ಯದರ್ಶಿ ಡಾ.ಫಹೀಮ್ ಅಬ್ದುಲ್ಲ, ಕ್ಯಾಂಪಸ್ ಕಾರ್ಯದರ್ಶಿ ನಿಫಾಲ್ ಹೂಡೆ ಇದ್ದರು.