ಉಡುಪಿ: ಒಂದೇ ಫ್ಲ್ಯಾಟ್ ಗಾಗಿ ಹಲವರಿಂದ ಹಣ ಪಡೆದು ಉದ್ಯಮಿಯಿಂದ ಮೋಸ – ಆರೋಪ

Spread the love

ಉಡುಪಿ: ಒಂದೇ ಫ್ಲ್ಯಾಟ್ ಗಾಗಿ ಹಲವರಿಂದ ಹಣ ಪಡೆದು ಉದ್ಯಮಿಯಿಂದ ಮೋಸ – ಆರೋಪ

ಉಡುಪಿ: ಒಂದೇ ಫ್ಲಾಟ್ ಗೆ ಒಂದಕ್ಕಿಂತ ಹೆಚ್ಚು ಮಂದಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಯಾರ ಹೆಸರಿಗೂ ಕೂಡ ನೋಂದಣಿ ಮಾಡದೆ ಅದರೊಂದಿಗೆ ಬ್ಯಾಂಕಿನಲ್ಲಿ ಕೂಡ ವಸತಿ ಸಮುಚ್ಛಯಕ್ಕೆ ಸಾಲ ಮಾಡಿ ಅದನ್ನು ಮರುಪಾವತಿಸದೆ ಅದರಲ್ಲಿ ವಾಸ ಮಾಡುತ್ತಿರುವ 36 ಕುಟುಂಬದವರನ್ನು ಬೀದಿ ಪಾಲು ಮಾಡುವ ಕೆಲಸವನ್ನು ಶ್ರೀಲಕ್ಷ್ಮೀ ಇನ್ಟ್ರಾ ಸ್ಟ್ರಕ್ಚರ್ನ ಮಾಲಕ ಅಮೃತ್ ಶೆಣೈ ಮಾಡಿದ್ದಾರೆ ಎಂದು ವಸತಿ ಸಮುಚ್ಚಯದ ನಿವಾಸಿಗಳು ಆರೋಪಿಸಿದ್ದಾರೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ವಸತಿ ಸಮುಚ್ಚಯದ ನಿವಾಸಿ, ವಕೀಲ ಗಿರೀಶ್ ಐತಾಳ್, ನಗರದ ಅಜ್ಜರಕಾಡು ವಾರ್ಡಿನ ಕಾಡಬೆಟ್ಟು ಎಂಬಲ್ಲಿರುವ ಶ್ರೀಲಕ್ಷ್ಮೀ ಇನ್ಟ್ರಾ ಸ್ಟ್ರಕ್ಚರ್ನ ಮಾಲಕ ಅಮೃತ್ ಶೆಣೈ ನಿರ್ಮಿಸಿರುವ 9 ಮಹಡಿಯ ವೈಜರ್ ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿ ಯನ್ನು 2014ರಿಂದ ಆರಂಭಿಸಿದ್ದು ಈ ವಸತಿ ಸಮುಚ್ಚಯದ ಕಾಮಗಾರಿ ಇನ್ನು ಕೂಡ ಪೂರ್ಣಗೊಂಡಿಲ್ಲ.

ಪ್ರಸ್ತುತ ಇಲ್ಲಿರುವ 36 ಫ್ಲ್ಯಾಟ್ಗಳ ಪೈಕಿ 30 ಫ್ಲ್ಯಾಟ್ಗಳಲ್ಲಿ ಸುಮಾರು 150 ಮಂದಿ ವಾಸ ಮಾಡಿಕೊಂಡಿದ್ದು. ಒಂದು ಫ್ಲ್ಯಾಟ್ಗೆ ಎರಡು ಮೂರು ಮಂದಿಯಿಂದಲೂ ಹಣ ಪಡೆದಿರುವುದರಿಂದ ಅವರು ಬಂದು ವಾಸ ಮಾಡಬಹುದು ಎಂಬ ಹೆದರಿಕೆಯಿಂದ ನಾವು ಬಂದು ವಾಸ ಮಾಡಲು ಆರಂಭಿಸಿದ್ದೇವೆ. ಈ ಸಮುಚ್ಚಯಕ್ಕೆ ಯಾವುದೇ ರೀತಿಯ ಮೂಲಭೂತ ಸೌಕರ್ಯ, ವಿದ್ಯುತ್, ನೀರಿನ ವ್ಯವಸ್ಥೆ ಇಲ್ಲದೆ ಬದುಕು ಸಾಗಿಸುತ್ತಿದ್ದೇವೆ ಎಂದು ಹೇಳಿದರು.

ಒಂದು ಫ್ಲ್ಯಾಟ್ಗೆ ಒಂದೇ ಬ್ಯಾಂಕಿನಲ್ಲಿ ಬೇರೆ ಬೇರೆಯವರ ಹೆಸರಿನಲ್ಲಿ ಸಾಲ ಕೂಡ ಮಂಜೂರಾಗಿದೆ. ಈ ಬಗ್ಗೆ ಕೆನರಾ ಬ್ಯಾಂಕಿನ ಉಪಮಹಾಪ್ರಬಂಧಕರಿಗೂ ದೂರು ನೀಡಲಾಗಿದೆ. ಹೀಗೆ ಹಣ ಕೊಟ್ಟು ಫ್ಲ್ಯಾಟ್ ಸಿಗದವರು 10ಕ್ಕೂ ಅಧಿಕ ಮಂದಿ ಇದ್ದಾರೆ. ವಸತಿ ಸಮುಚ್ಚಯದ ಕಾಮಗಾರಿ ಇನ್ನು ಶೇ.40ರಷ್ಟು ಬಾಕಿ ಇದೆ. ಆರು ಫ್ಲ್ಯಾಟ್ಗಳ ಕಾಮಗಾರಿ ಇನ್ನೂ ನಡೆದಿಲ್ಲ ಎಂದು ಅವರು ದೂರಿದರು.

ಸಮುಚ್ಛಯದ ಮಾಲಿಕರು ರಾಜಕೀಯ ಮುಖಂಡರಾಗಿದ್ದು ನಾವು ಯಾವುದೇ ದೂರು ನೀಡಿದರೂ ಸಹ ಏನೂ ಪ್ರಯೋಜನವಾಗಿಲ್ಲ. ಸಮುಚ್ಛಯದಲ್ಲಿ ವಾಸ ಮಾಡುತ್ತಿರುವವರಿಗೆ ಬೆದರಿಕೆ ಹಾಕುವ ಕೆಲಸವನ್ನೂ ಕೂಡ ಮಾಡುತ್ತಾರೆ ಎಂದು ಆರೋಪಿಸದರು.

ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ಇತ್ತೀಚೆಗೆ ಅವರ ವಿರುದ್ಧ ಈ ಫ್ಲ್ಯಾಟ್ಗೆ ಸಂಬಂಧಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ಕೂಡ ದಾಖಲಾಗಿದೆ. ಈ ನಿಟ್ಟಿನಲ್ಲಿ ಜೂ.19ರಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಮತ್ತು ಕಾನೂನು ಹೋರಾಟಕ್ಕಾಗಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು. ಇವರಿಂದ ಇನ್ನು ಯಾರು ಕೂಡ ಮೋಸ ಹೋಗಬಾರದು ಮತ್ತು ನಮಗೆ ನ್ಯಾಯ ಸಿಗಬೇಕು ಎಂದು ಅವರು ಒತ್ತಾಯಿಸಿದರು.

ವಸತಿ ಸಮುಚ್ಚಯದ ನಿವಾಸಿಗಳಾದ ಅಬ್ದುಲ್ ರಝಾಕ್, ಪಾಂಡುರಂಗ ರಾವ್, ಜೆಸಿಂತಾ ಮೆಂಡೋನ್ಸಾ, ಜೋಷಿತಾ ಮಥಾಯಸ್, ಸಂತೋಷ್ ಇನ್ನಿತರರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು


Spread the love