Home Mangalorean News Kannada News ಉಡುಪಿ: ಕರ್ನಾಟಕದಲ್ಲಿ ಗಾಂಧಿ ಮೊದಲ ಹೆಜ್ಜೆ ಶತಮಾನೋತ್ಸವ  

ಉಡುಪಿ: ಕರ್ನಾಟಕದಲ್ಲಿ ಗಾಂಧಿ ಮೊದಲ ಹೆಜ್ಜೆ ಶತಮಾನೋತ್ಸವ  

Spread the love

 

ಉಡುಪಿ:- ಆತ್ಮಶುದ್ದಿಯ ಚಳವಳಿಗೆ ಉಡುಪಿ ಮೇಲ್ಪಂಕ್ತಿಯಾಗಲಿ; ಪ್ರಜಾಭಿಪ್ರಾಯ ರೂಪಣೆ ಸೌಮ್ಯ ಮಾರ್ಗದಿಂದ ಆದರಷ್ಟೆ ಸುಸ್ಥಿರ ಅಭಿವೃದ್ಧಿ ಸಾಧ್ಯ. ಇಂದಿಗೂ ಇದೇ ನೀತಿ ನಿರೂಪಣೆ ಪ್ರಸ್ತುತ ಎಂದು ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಪೀಠದ ಬೋಧಕ ವಿನೀತ್ ರಾವ್ ಹೇಳಿದರು.

ಅವರಿಂದು ಉಡುಪಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾಂಗಣದಲ್ಲಿ ಆಯೋಜಿಸಲಾದ ಕರ್ನಾಟಕದಲ್ಲಿ ಗಾಂಧಿ ಹೆಜ್ಜೆಗೆ ನೂರು ವರ್ಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

DSCN0689

 

ಗಾಂಧೀಜಿಯವರು ರಾಜ್ಯಕ್ಕೆ 18 ಬಾರಿ ಭೇಟಿ ನೀಡಿದ್ದು, ಉಡುಪಿಗೆ ಅವರ ಪ್ರಥಮ ಭೇಟಿ ಫೆಬ್ರವರಿ 25, 1934. ಗಾಂಧೀ ಅವರು ಉಡುಪಿಗೆ ಭೇಟಿ ನೀಡಿ 81 ವರ್ಷಗಳು. ಆಗ ಗಾಂಧೀಜಿಗೆ 67 ವರ್ಷದ ಆಸುಪಾಸು. ಖಾದಿ ನಿಧಿಗೆ ಧನಸಂಗ್ರಹಕ್ಕೆ ಬಂದವರು 1934ರ ಫೆಬ್ರವರಿ 25ರಂದು ಅಪರಾಹ್ನ 2.30ಕ್ಕೆ ಮುಲ್ಕಿಗೆ ಆಗಮಿಸಿದ್ದರು. ಅಲ್ಲಿಂದ ಕಾಪು, ಕಾಪುವಿನಿಂದ ಉದ್ಯಾವರ, ಅಲ್ಲಿಂದ ಉಡುಪಿಗೆ ಆಗಮಿಸಿದ್ದರು. ಉಡುಪಿಗೆ ಗಾಂಧೀಜಿ ಅವರನ್ನು ಹಾಜಿ ಅಬ್ದುಲ್ಲಾ ಸಾಹೇಬರು ಸ್ವಾಗತಿಸಿದ್ದರು. ಕಾಡಬೆಟ್ಟು ಶ್ರೀನಿವಾಸ ಪೈ ಅವರ ಖಾದಿ ಅಂಗಡಿಯನ್ನು ಉದ್ಘಾಟಿಸಿದ್ದರು. ಅಜ್ಜರಕಾಡಿನಲ್ಲಿ ಅದೇ ದಿನ ಸುಮಾರು 6000 ಜನರನ್ನು ಉದ್ದೇಶಿಸಿ ಮಾತನಾಡಿದ್ದರು ಎಂದು ರಾಷ್ಟ್ರಬಂಧು ಪತ್ರಿಕೆ ವರದಿ ಮಾಡಿತ್ತು.

ಉದ್ಯಾವರದಲ್ಲಿ ಹೊಳೆಯನ್ನು ದೋಣಿ ಮೂಲಕ ದಾಟುವ ಸಂದರ್ಭದಲ್ಲಿ ದೋಣಿಯವರಲ್ಲೂ ಗಾಂಧೀಜಿಯವರನ್ನು ಕರೆದೊಯ್ಯಲು ಸ್ಪರ್ಧೆ ಏರ್ಪಟ್ಟಿತ್ತು. ಆಗ ಗಾಂಧೀಜಿ ಕುಡಿತವನ್ನು ಬಿಡುವವರಿಗೆ ತನ್ನ ಕರೆದೊಯ್ಯಲು ಅವಕಾಶ ಎಂದು ಷರತ್ತು ವಿಧಿಸಿದ್ದರು. ಅದನ್ನು ಡಾ ಎಂ ವಿ ಕಾಮತ್ ನೆನಪಿಸಿದ್ದರು.

ಅವರವರ ಕೆಲಸವನ್ನು ಅವರವರೇ ಮಾಡುವುದರಿಂದ ನಾವು ಸ್ವಾವಲಂಬಿಗಳಾಗುವ ಜೊತೆಗೆ ಸ್ವಾವಲಂಬಿ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸುತ್ತಿದ್ದ ಗಾಂಧಿ ಅವರು, ಉಡುಪಿಯಲ್ಲಿ ನಿರುಪಮಾ ಎಂಬ ಬಾಲಕಿಯು ಹರಿಜನ ಪ್ರವಾಸದಲ್ಲಿ ನೀಡಿದ ಕಾಣಿಕೆಯ ಬಗ್ಗೆಯೂ ವರದಿ ಇದೆ.

ಉಡುಪಿಯ ಅಜ್ಜರ ಕಾಡಿನಲ್ಲಿ ಗಾಂಧಿ ಭೇಟಿಯ ಮಾಹಿತಿ ಫಲಕ ಬೇಕಿದೆ. ಲ್ಯಾಂಡ್ ಮಾರ್ಕ್‍ಗಳನ್ನು ರಕ್ಷಿಸುವ ಕೆಲಸವಾಗಬೇಕಿದೆ ಎಂದು ಬೋಧಕರು, ಸಂಶೋಧಕರು ಆಗಿರುವ ವಿನೀತ್ ರಾವ್ ಹೇಳಿದರು.

ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಗ್ರೇಸಿ ಗೊನ್ಸಾಲಿಸ್ ಉಪಸ್ಥಿತರಿದ್ದರು. ಗಣೇಶ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  ಗಣೇಶ್ ಗಂಗೊಳ್ಳಿ ಅವರಿಂದ ಗಾಂಧಿ ಬಜನ್ ಕಾರ್ಯಕ್ರಮ ಮತ್ತು ಗಾಂಧಿ ಕುರಿತ ಚಲನಚಿತ್ರ ಪ್ರದರ್ಶಿಸಲಾಯಿತು.ಬಾಲ ಮಂದಿರದ ಮಕ್ಕಳು, ಮತ್ತು ಸ್ತ್ರೀ ಶಕ್ತಿ ಸಂಘಟನೆಯವರು ಕಾರ್ಯಕ್ರಮದಲ್ಲಿದ್ದರು.


Spread the love

Exit mobile version