
ಉಡುಪಿ: ಕಲಾವಿದೆ ಅನುಪಮಾ ಕಲಾಕೃತಿಗೆ “ಆರ್ಟ್ ಲೆಜೆಂಡ್ ಗೋಲ್ಡನ್ ಮಯೂರಿ” ಪ್ರಶಸ್ತಿ
ಉಡುಪಿ: ಖ್ಯಾತ ಕಲಾವಿದೆ ಅನುಪಮ ಅವರ ಕಲಾಕೃತಿಯು ಈ ಬಾರಿಯ ಪ್ರತಿಷ್ಠಿತ ಕೊನಸೀಮ ಚಿತ್ರಕಲಾ ಪರಿಷದ್ ಅಮಲಾಪುರಂ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ “ಆರ್ಟ್ ಲೆಜೆಂಡ್ ಗೋಲ್ಡನ್ ಮಯೂರಿ” ಪ್ರಶಸ್ತಿಗೆ ಪಾತ್ರರಾಗಿದೆ.
ಗಡಿನಾಡಿನ ಕಾಟುಕುಕ್ಕೆಯ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿಬೆಳೆದ ಕಲಾ ಬೆಡಗಿ ಅನುಪಮಾ ಖ್ಯಾತ ಕಾಷ್ಠ ಶಿಲ್ಪಿ ಮತ್ತು ಕಾರ್ಟೂನಿಸ್ಟ್ ಜಿ.ಕೆ.ಭಟ್ ಹಾಗು ಜಯಲಕ್ಷ್ಮಿ ಅವರ ಸುಪುತ್ರಿ. ವಂಶವಾಹಿನಿಯಾಗಿ ಬಂದ ಕಲೆಯ ಪರಿಮಳದ ಜೊತೆಗೆ ತನ್ನ ಸಾಧನೆಯ ಮೆರುಗನ್ನು ಬೆರೆಸಿ “ಕುಂಚದ ಬೆಡಗಿ” ಎಂದು ಗುರುತಿಸಲ್ಪಟ್ಟ ಕಲಾ ಮಾತೆಯ ಮಗಳು. ಇವರ ಮನೆಯೇ ಒಂದು ಕಲಾಮಂದಿರ. ಗೋಡೆಯ ತುಂಬಾ ಮ್ಯೂರಲ್ ಪಾಂಟಿಂಗ್ ನಿಂದ ಆಧ್ಯಾತ್ಮಿಕ ಸಂವೇದನೆಯನ್ನು ಉಂಟುಮಾಡುತ್ತಾ ಆಧುನಿಕತೆಯ ಸ್ಪರ್ಶದೊಂದಿಗೆ ಇವು ನೋಡುಗರ ಮೈನವಿರೇಳಿಸುತ್ತವೆ. ಇದಲ್ಲದೆ ಪಾಟ್ ಪೈಂಟಿಂಗ್ ಮತ್ತು ತೈಲವರ್ಣ ರಚನೆಯಲ್ಲೂ ಇವರು ಪರಿಣಿತೆ.
ಪ್ರತಿಷ್ಠಿತ “ಪರಮೇಶ್ವರ ಪುಲಕೇಶಿ ಪ್ರಶಸ್ತಿ 2018” , “ಪೀಪಲ್ಸ್ ಆರ್ಟ್ ಫೌಂಡೇಶನ್” ನಡೆಸಿರುವ ರಾಷ್ಟ್ರ ಮಟ್ಟದ ಮಹಿಳಾ ಕಲಾ ಸ್ಪರ್ಧೆಯಲ್ಲಿ ಇವರ ಕಲಾಕೃತಿಗಳು ಶ್ರೇಷ್ಠ ದರ್ಜೆಯ ಗೌರವಕ್ಕೆ ಪಾತ್ರವಾಗಿವೆ. “ಕಲಾಸಿರಿ ಪ್ರಶಸ್ತಿ” ಸಾಹಿತ್ಯ ಸಂಭ್ರಮ 2018-19 ಪುತ್ತೂರು ಸಾಹಿತ್ಯ ವೇದಿಕೆ ಯಕ್ಷ ಮಿತ್ರ ಸಾಂಸ್ಕೃತಿಕ ಸಂಘ, “ಸ್ವರ್ಣಶ್ರೀ ಪ್ರಶಸ್ತಿ” 2018-19 ಲವ್ ಇಂಡಿಯಾ ರೀಜನಲ್ ಸಂಸ್ಥೆಯಿಂದ ನೀಡಲಾಗಿದೆ. “ಗೌರವ ಪುರಸ್ಕಾರ” 2018-19 ವಿಶ್ವ ಧರ್ಮ ಮಂದಿರ ಸಂಸ್ಥೆ ನೀಡಿದೆ. “ಸಾಧಕಿಯರಿಗೆ ಸನ್ಮಾನ ಪ್ರಶಸ್ತಿ- 2018-19 ” ಹೀಗೆ ಹಲವು ಪ್ರಶಸ್ತಿಗಳು ಅವರ ಪ್ರತಿಭೆಗೆ ಸಾಕ್ಷಿಯಾಗಿವೆ.