ಉಡುಪಿ: ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡ 74 ಲಕ್ಷ ರೂ. ಮೌಲ್ಯದ ಸೊತ್ತು ಹಸ್ತಾಂತರ

Spread the love

ಉಡುಪಿ: ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡ 74 ಲಕ್ಷ ರೂ. ಮೌಲ್ಯದ ಸೊತ್ತು ಹಸ್ತಾಂತರ

ಉಡುಪಿ: ವಿವಿಧ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ಹಾಗೂ ಸೊತ್ತುಗಳನ್ನು ಸಂಬಂಧಿಸಿದ ರೂಪಾಯಿ 74,52,170 ಮೌಲ್ಯದ ಸೊತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಮಂಗಳವಾರ ಉಡುಪಿ ಜಿಲ್ಲೆಯ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು.

ವಶಪಡಿಸಿಕೊಂಡ ಸೊತ್ತುಗಳನ್ನು ಸಂಬಂಧಪಟ್ಟ ನ್ಯಾಯಾಲಯದಿಂದ ಅನುಮತಿ ಪಡೆದು ಹಿಂತಿರುಗಿಸುವ ಕಾರ್ಯಕ್ರಮ ನಡೆದಿದ್ದು ಈ ವೇಳೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳನ್ನು ಪತ್ತೆ ಹಚ್ಚಲು ಅಧಿಕಾರಿಯವರಿಗೆ ಪೊಲೀಸ್ ವರಿಷ್ಟಾಧಿಕಾರಿ ಅಕ್ಷಯ್ ಎಂ. ಹೆಚ್ ಅವರು ಸೂಚನೆ ನೀಡಿದ್ದರು.

ಕಾರ್ಯಕ್ರಮದಲ್ಲಿ ಕಾರ್ಕಳ ಗ್ರಾಮಾಂತರ ಠಾಣೆ, ಹಿರಿಯಡ್ಕ, ಬೈಂದೂರು, ಕೊಲ್ಲೂರು, ಕಾಪು ಠಾಣೆಗಳ ತಲಾ ಒಂದು ಪ್ರಕರಣ, ಕೋಟ, ಮಲ್ಪೆ, ಠಾಣೆಯ ತಲಾ 2 ಪ್ರಕರಣಗಳು, ಉಡುಪಿ ನಗರ 3, ಕುಂದಾಪುರ 5, ಪಡುಬಿದ್ರಿ 4, ಕುಂದಾಪುರ ಗ್ರಾಮಾಂತರ 4, ಭ್ರಹ್ಮಾವರ 5 ಹಾಗೂ ಮಣಿಪಾಲ ಠಾಣೆಯ 10 ಪ್ರಕರಣಗಳು ಸೇರಿ ಒಟ್ಟು 40 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸೊತ್ತುಗಳನ್ನು ವಾರೀಸುದಾರರಿಗೆ ಹಸ್ತಾಂತರಿಸಲಾಯಿತು.

ಈ ಪ್ರಕರಣಗಳಲ್ಲಿ 7 ಮೋಟಾರು ವಾಹನ ಅಂದಾಜು ಬೆಲೆ ರೂಪಾಯಿ 2,94,000, ಚಿನ್ನ ಒಟ್ಟು 1 ಕೆಜಿ 195 ಗ್ರಾಂ ಅಂದಾಜು ಬೆಲೆ ರೂಪಾಯಿ 68,23,810, ಬೆಳ್ಳಿ ಒಟ್ಟು 1 ಕೆಜಿ 192 ಗ್ರಾಂ ಅಂದಾಜು ಬೆಲೆ ರೂಪಾಯಿ 88,510, ಮೊಬೈಲ್ ಫೋನ್ 10 ಅಂದಾಜು ಬೆಲೆ ರೂಪಾಯಿ 75,700 ಮತ್ತು ನಗದು ರೂಪಾಯಿ 1,70,150 ಒಳಗೊಂಡಿದ್ದು, ಒಟ್ಟಾರೆ ರೂಪಾಯಿ 74,52,170 ಮೌಲ್ಯದ ಸೊತ್ತುಗಳನ್ನು ವಾರೀಸುದಾರರಿಗೆ ಪೊಲೀಸ್ ವರಿಷ್ಟಾಧಿಕಾರಿ ಅಕ್ಷಯ್ ಎಂ. ಹೆಚ್ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಕ್ಷಯ್ ಎಂ. ಹೆಚ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ದಿನಕರ್, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಉಪಸ್ಥಿತರಿದ್ದರು.


Spread the love