ಉಡುಪಿ ಜಿಲ್ಲಾ ಬಿಜೆಪಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ದ ರಸ್ತೆಗುಂಡಿಗಳ ಜೊತೆ ಸೆಲ್ಫಿ ಅಭಿಯಾನ
ಉಡುಪಿ: ನಗರ ಸಭೆ ವ್ಯಾಪ್ತಿ ಹಾಗೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರಸ್ತೆಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದಾಗಿ ಹೊಂಡ-ಗುಂಡಿಗಳಿಂದ ತುಂಬಿ ಹೋಗಿದ್ದು ರಸ್ತೆಗಳ ದುರವಸ್ಥೆ ಬಗ್ಗೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ಹೀಗಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ರಸ್ತೆಗಳ ಗುಂಡಿಗಳ ಜೊತೆ ಸೆಲ್ಫೀ ಫೋಟೊ ಎಂಬ ವಿಶೇಷ ಅಭಿಯಾನವನ್ನು ಆಯೋಜಿಸಿದೆ.
ಉಡುಪಿ ನಗರ ಸಭಾ ವ್ಯಾಪ್ತಿಯ ಹೆಚ್ಚಿನ ರಸ್ತೆಗಳಲ್ಲಿ ಎಲ್ಲಿ ನೋಡಿದರಲ್ಲಿ ಗುಂಡಿಗಳದ್ದೇ ಕಾರುಬಾರು. ಕಾಂಕ್ರೀಟ್ ರಸ್ತೆಗಳನ್ನು ಹೊರತುಪಡಿಸಿ ಒಳ ರಸ್ತೆಗಳಲ್ಲೂ ಗುಂಡಿಗಳದ್ದೇ ಮೇಲುಗೈ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹಲವಾರು ರಸ್ತೆಗಳು ಹೊಂಡಮಯವಾಗಿದೆ. ಇದೇ ಹೊಂಡಗಳಿಂದಾಗಿ ಹಲವಾರು ಮಂದಿ ತಮ್ಮ ದ್ವಿಚಕ್ರ ವಾಹನಗಳಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ರಸ್ತೆಗಳ ಗುಂಡಿಗಳ ಜೊತೆ ಸೆಲ್ಫಿ ಫೋಟೊ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ಮತ್ತು ನಮೋ ಆಪ್ ನಲ್ಲಿ ಹಂಚಿಕೊಳ್ಳುವುದರ ಮೂಲಕ ಸೆಪ್ಟೆಂಬರ್ 15 -16 ರಂದು ಎರಡು ದಿನ ಹ್ಯಾಶ್ ಟ್ಯಾಗ್ ಮೂಲಕ ಟ್ರೆಂಡಿಂಗ್ ಮಾಡಲು ಬಿಜೆಪಿ ನಿರ್ಧರಿಸಿದೆ.
#CongressNeglectsUdupi, #selfiewithPotholes ಮತ್ತು #UdupiWithBJP ಎಂಬ ಹ್ಯಾಶ್ ಟ್ಯಾಗ್ ಮಾಡುವುದರೊಂದಿಗೆ ರಸ್ತೆಗಳ ಗುಂಡಿಗಳ ಸೆಲ್ಫಿ ಅಭಿಯಾನ ಕೈಗೊಂಡಿರುವುದಾಗಿ ಜಿಲ್ಲಾ ಬಿಜೆಪಿ ಪ್ರಕಟಣೆ ತಿಳಿಸಿದೆ.