ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಗಾಂಧೀಜಿ ಪುಣ್ಯಸ್ಮರಣೆ

Spread the love

ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಗಾಂಧೀಜಿ ಪುಣ್ಯಸ್ಮರಣೆ

ಉಡುಪಿ: ಮಹಾತ್ಮಾ ಗಾಂಧಿಜಿಯವರ ತತ್ವಾದರ್ಶಗಳು ಮತ್ತು ನಾಯಕತ್ವ ಸಮಾಜಕ್ಕೆ ಎಂದೆಂದಿಗೂ ಪ್ರಸ್ತುತವಾಗಿದೆ. ತನ್ನ ಸರಳತೆ, ಸತ್ಯ ನಿಷ್ಠೆ, ಅಹಿಂಸಾ ತತ್ವ ಮತ್ತು ಪ್ರಾಮಾಣಿಕತೆಯಿಂದ ಇಂದು ಇಡೀ ವಿಶ್ವಕ್ಕೆ ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಶನಿವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಆಯೋಜಿಸಿದ ಹುತಾತ್ಮ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲರೂ ಪ್ರೀತಿಸಬಹುದಾಗಿದ್ದ ವ್ಯಕ್ತಿತ್ವ ಶಕ್ತಿಯನ್ನು ಹೊಂದಿದ್ದ ಮಹಾತ್ಮಾಗಾಂಧೀ ದೇಶದ ಭ್ರಾತೃತ್ವ ಮತ್ತು ಜಾತ್ಯತೀತ ಮೌಲ್ಯಗಳಿಗೆ ಪ್ರೇರಣೆಯಾದವರಾಗಿದ್ದಾರೆ. ಅವರು ಶೋಷಿತ ಪರವಾಗಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿ ಎನಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರನ್ನು ಅತಿ ಹೆಚ್ಚು ಪ್ರೀತಿಸುತ್ತಿದ್ದರು. ಸಮಾಜದಲ್ಲಿ ಶೋಷಣೆ, ಅಸಮಾನತೆ ಹೋಗಲಾಡಿಬೇಕು ಎಂದು ಪಣತೊಟ್ಟ ವ್ಯಕ್ತಿ ಗಾಂಧಿಜಿ ಈ ಮೂಲಕ ವಿಶ್ವದ ಎಲ್ಲಾ ರಾಷ್ಟ್ರಗಳು ಅವರನ್ನು ಗುರುತಿಸುವ ಮಟ್ಟಿನ ವ್ಯಕ್ತಿತ್ವವನ್ನು ತನ್ನ ಜೀವನದ ಮೂಲಕ ತೋರಿಸಿಕೊಟ್ಟರು. ನಾವು ಕೂಡ ನಮ್ಮ ಸಮಾಜದಲ್ಲಿನ ಅಶ್ಪಶ್ರ್ಯತೆಯನ್ನು ಹೊಗಲಾಡಿಸಿದಾಗ ಮಾತ್ರ ಅವರ ಪುಣ್ಯಸ್ಮರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಲ್ಲಿ ಕೊರಗ ಸಮುದಾಯದಲ್ಲಿ ಸಾಧನೆ ತೋರಿದ ಸುಕ್ರ ಕೊರಗ, ವಿನುತ, ಬಾಬು ಕೊರಗ ಮತ್ತು ಶ್ವೇತಾ ಇವರುಗಳನ್ನು ಸನ್ಮಾನಿಸಲಾಯಿತು. ಅಲ್ಲದೆ 70 ಕೊರಗ ಕುಟುಂಬಗಳಿಗೆ ಮನೆಗೆ ಅಗತ್ಯವಿರುವ ಪರಿಕರಗಳನ್ನು ವಿತರಿಸಲಾಯಿತು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೊ, ನಾಯಕರುಗಳಾದ ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳಕೆಬೈಲು, ಅಣ್ಣಯ್ಯ ಸೇರಿಗಾರ್, ಕುಶಲ ಶೆಟ್ಟಿ, ಸರಳಾ ಕಾಂಚನ್, ಗೀತಾ ವಾಗ್ಳೆ, ಜನಾರ್ಧನ ಭಂಡಾರ್ಕರ್, ನಾಗೇಶ್ ಉದ್ಯಾವರ, ಹರೀಶ್ ಕಿಣಿ, ಮೇರಿ ಡಿಸೋಜಾ, ಪ್ರಮೀಳಾ ಜತ್ತನ್ನ, ಶಾಂತಿ ಪಿರೇರಾ, ಲೂಯಿಸ್ ಲೋಬೊ ಹಾಗೂ ಇತರರು ಉಪಸ್ಥೀತರಿದ್ದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಂಯೋಜಕಿ ರೋಶನಿ ಒಲಿವೇರಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಸದಸ್ಯೆ ಡಾ|ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love