ಉಡುಪಿ ಜಿಲ್ಲೆ 25 ಆಚರಣಾ ಸಮಿತಿಯಲ್ಲಿ ಪತ್ರಕರ್ತರ ನಿರ್ಲಕ್ಷ್ಯ ಖೇದಕರ – ರಾಜೇಶ್ ಶೆಟ್ಟಿ

Spread the love

ಉಡುಪಿ ಜಿಲ್ಲೆ 25 ಆಚರಣಾ ಸಮಿತಿಯಲ್ಲಿ ಪತ್ರಕರ್ತರ ನಿರ್ಲಕ್ಷ್ಯ ಖೇದಕರ – ರಾಜೇಶ್ ಶೆಟ್ಟಿ

ಉಡುಪಿ: ಜಿಲ್ಲೆಯ 25 ನೇ ವರ್ಷದ ಆಚರಣಾ ಸಮಿತಿಯಲ್ಲಿ ಪತ್ರಕರ್ತರನ್ನು ನಿರ್ಲಕ್ಷಿಸಲಾಗಿದೆ. ಆಚರಣಾ ಸಮಿತಿಯಲ್ಲಿ ಎಲ್ಲಿಯೂ ಕೂಡ ಜಿಲ್ಲೆ ರಚನೆಯಾದ ವೇಳೆ ಅಥವಾ ಪ್ರಸ್ತುತ ಪತ್ರಕರ್ತರನ್ನು ಕೂಡ ಸೇರಿಸಿಕೊಳ್ಳದಿದರುವುದು ಖೇದಕರ ಸಂಗತಿ ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಲೆವೂರು ರಾಜೇಶ್ ಶೆಟ್ಟಿ ಹೇಳಿದರು.

ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಆಚರಣೆಗೆ ಈಗಾಗಲೇ ಸಮಿತಿಯನ್ನು ಮಾಡಲಾಗಿದೆ. ಆದರೆ ಜಿಲ್ಲೆ ರಚನೆಯಾಗುವ ಸಂದರ್ಭದಲ್ಲಿ ವರದಿ ಮಾಡಿದ ಮತ್ತು ಆ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವರದಿಗಾರು ಅಥವಾ ಪ್ರಸ್ತುತ ಇರುವ ವರದಿಗಾರರನ್ನು ಸೇರಿಸಿಲ್ಲ. ಅಂದಿನ ದಿನಗಳಲ್ಲಿ ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ವರದಿ ಮಾಡಿರುವುದು ಪತ್ರಕರ್ತರು ಮತ್ತು ಅವರಲ್ಲಿ ಇಂದಿಗೂ ಕೂಡ ಅದರ ಮಾಹಿತಿ ಇದ್ದು ಅದನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳುವಲ್ಲಿ ಸಹಕಾರಿಯಾಗುತ್ತಿತ್ತು. ಆದರೆ ಜಿಲ್ಲಾಡಳಿತ ಪ್ರಮುಖವಾಗಿ ಪತ್ರಕರ್ತರನ್ನೇ ನಿರ್ಲಕ್ಷಿಸಿದ್ದು ನಿಜಕ್ಕೂ ಖೇದಕರ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಇನ್ನಾದರೂ ಜಿಲ್ಲಾಡಳಿತ ಈ ಕುರಿತು ಚಿಂತಿಸಬೇಕು ಎಂದರು.

ಜಿಲ್ಲೆಯ ರಜತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಜಿಲ್ಲೆಯ ಕಲೆ ಸಂಸ್ಕೃತಿ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಕೆಲಸ ನಡೆಯಬೇಕಾಗಿದೆ. ಬದಲಾಗಿ ಜಿಲ್ಲೆ ಕಲೆ ಸಂಸ್ಕೃತಿಯನ್ನು ಮರೆತು ಬೇರೆ ಕಡೆಯಿಂದ ಕಲಾಕಾರರನ್ನು ತರಿಸಿ ಕಾರ್ಯಕ್ರಮ ನಡೆಸುವುದು ಅಷ್ಟೊಂದು ಸಮಂಜಸವಲ್ಲ. ಜಿಲ್ಲೆಯಲ್ಲಿಯೇ ಕಲೆ ಮತ್ತು ಸಂಸ್ಕೃತಿ ವಿಚಾರದಲ್ಲಿ ಹೆಸರು ಮಾಡಿದವರನ್ನು ಗುರುತಿಸಿ ಅವರಿಗೆ ರಜತಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಅವಕಾಶ ಮಾಡಿಕೊಡಬೇಕು ಈ ಬಗ್ಗೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳಿ, ಕಾರ್ಯದರ್ಶಿಗಳಾದ ರಹೀಂ ಉಜಿರೆ, ಪ್ರಮೋದ್ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಯಕರ ಸುವರ್ಣ ಉಪಸ್ಥಿತರಿದ್ದರು.


Spread the love