ಉಡುಪಿ ಡಿಸಿ ಜಗದೀಶ್‌ ವರ್ಗಾವಣೆ, ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮರಾವ್‌ ನೇಮಕ

Spread the love

ಉಡುಪಿ ಡಿಸಿ ಜಗದೀಶ್‌ ವರ್ಗಾವಣೆ, ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮರಾವ್‌ ನೇಮಕ

ಉಡುಪಿ: ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಜಿ ಜಗದೀಶ್‌ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಭಾನುವಾರ ಆದೇಶ ಹೊರಡಿಸಿದೆ

ಉಡುಪಿಗೆ ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರ್ಗಿ ಇದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೂರ್ಮ ರಾವ್‌ ಅವರನ್ನು ನೇಮಕ ಮಾಡಲಾಗಿದ್ದು, ಜಿ ಜಗದೀಶ್‌ ಅವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ವರ್ಗಾವಣೆಗೊಳಿಸಲಾಗಿದೆ

2019 ರ ಅಗಸ್ಟ್‌ 20 ರಂದು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನಿರ್ಗಮನ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರಿಂದ ಅಧಿಕಾರ ವಹಿಸಿ ಕೊಂಡ ಜಿ ಜಗದೀಶ್‌ ಆರಂಭದಿಂದಲ್ಲೆ ಜಿಲ್ಲೆಯ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು. ಆರಂಭದಿಂದಲೂ ಸವಾಲುಗಳನ್ನೇ ಎದುರಿಸಿದ ಅವರು ವ್ಯವಸ್ಥಿತವಾಗಿ ನಿರ್ವಹಿಸಿದ ಕೀರ್ತೀ ಅವರದ್ದಾಗಿದೆ.

ಮಹಾಮಾರಿ ಕೊರೋನಾ ಸಮಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಜಿಲ್ಲಾಧಿಕಾರಿ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಂಡರು. ಕೊರೋನಾ ಸಮಯದಲ್ಲಿ ಇಡೀ ರಾಜ್ಯ ಬೆಡ್‌, ಆಕ್ಸಿಜನ್‌, ವೆಂಟಿಲೇಟರ್‌ ಸಮಸ್ಯೆಯಿಂದ ಬಳಲುತ್ತಿದ್ದಾಗ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕೊರತೆಯಾಗದಂತೆ ನಿರ್ವಹಣೆ ಮಾಡಿದರು.

ಜಿಲ್ಲೆಯಲ್ಲಿ ಖಾಸಗಿಯವರ ಸಹಭಾಗಿತ್ವವನ್ನು ಬಳಸಿಕೊಂಡು ಕೋವಿಡ್‌ ಕಿಟ್‌ ಗಳನ್ನು ಒದಗಿಸಿದ್ದಲ್ಲದೆ, ಸರಕಾರಿ ಆಸ್ಪತ್ರೆಗೆಳಿಗೆ ಅಂಬುಲೆನ್ಸ್‌ ಗಳನ್ನು ದಾನವಾಗಿ ನೀಡುವಂತೆ ಸಾರ್ವಜನಿಕರನ್ನು ಉತ್ತೇಜಿಸಿದರು. ಲಾಕ್‌ ಡೌನ್‌ ಸಮಯದಲ್ಲಿ ಸರಕಾರಕ್ಕೆ ಯಾವುದೇ ರೀತಿಯಲ್ಲಿ ಹೊರೆಯಾಗದಂತೆ ನೇರವಾಗಿ ಅಲ್ಲದೆ ಹೋದರೂ ದಾನಿಗಳಿಂದ ನಿರ್ಗತಿಕರಿಗೆ ಊಟದ ವ್ಯವಸ್ಥೆ, ಕಿಟ್‌ ವ್ಯವಸ್ಥೆ ಮಾಡುವುದರ ಮೂಲಕ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿ ರೂಪಿಸಿದರು.

ಕೊರೊನಾ ತಡೆಗಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ ಜಗದೀಶ್‌ ಅವರು ಒಂದು ಹಂತದಲ್ಲಿ ವೀಪರೀತ ಹಂತಕ್ಕೆ ತಲುಪಿದ್ದ ವೇಳೆ ಅದನ್ನು ನಿಯಂತ್ರಣಕ್ಕೆ ತರುವಲ್ಲಿ ತೋರಿಸಿದ ಕಾಳಜಿ ವರ್ಣನಾತೀತವಾಗಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ ಅತೀ ಹೆಚ್ಚು ಪರೀಕ್ಷೆಗಳನ್ನು ನಡೆಸುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಮೂಲಕ ಜಿಲ್ಲೆಯನ್ನು ಕೊರೋನಾ ಮುಕ್ತ ಮಾಡುವತ್ತ ಶ್ರಮಿಸಿದ ಕೀರ್ತಿ ಅವರದ್ದಾಗಿದೆ.

ಇದಲ್ಲದೆ ಒರ್ವ ಜಿಲ್ಲಾಧಿಕಾರಿಯಾಗಿ ನೇರವಾಗಿ ಲಭಿಸುವ ಮೂಲಕ ಜಿಲ್ಲಾಡಳಿತವನ್ನು ಜನರ ಬಳಿ ಕೊಂಡೊಯ್ದರು. ಜಿಲ್ಲಾಧಿಕಾರಿಯಾಗಿ ಕೇವಲ ಕಚೇರಿಗೆ ಸೀಮಿತವಾಗದೆ ಇಡೀ ಜಿಲ್ಲೆಯ ಪ್ರವಾಸ ಮಾಡಿದ್ದಲ್ಲದೆ ಸಮಸ್ಯೆಗಳು ಬಂದಾಗ ವ್ಯವಸ್ಥಿತವಾಗಿ ಅವುಗಳನ್ನು ಪರಿಹಾರ ಮಾಡುವ ಕೆಲಸ ಮಾಡಿದ್ದಾರೆ. ಜಿಲ್ಲೆಯ ಆಗುಹೋಗುಗಳನ್ನು ಜನರಿಗೆ ನೇರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುವ ಕೆಲಸ ಪ್ರತಿನಿತ್ಯ ನಡೆಸುತ್ತಿದ್ದರು. ಸ್ವತಃ ಕೃಷಿಕರಾಗಿ ಮನೆಯಲ್ಲಿ ಕೃಷಿ ಮಾಡುವುದರೊಂದಿಗೆ ಹಡಿಲು ಭೂಮಿಯಲ್ಲಿ ಕೃಷಿಯನ್ನು ಮಾಡುವುದರ ಮೂಲಕ ಜನರಿಗೆ ಕೃಷಿಯನ್ನು ಉತ್ತೇಜಿಸುವ ಕೆಲಸ ಮಾಡಿದರು. ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಉಡುಪಿ ನಗರದಲ್ಲಿ ಏಕಾಏಕಿ ನೆರೆ ಏರಿ ನಷ್ಟಗಳು ಸಂಭವಿಸಿದಾಗ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ಜನರ ಶ್ಲಾಘನೆಗೆ ಪಾತ್ರವಾಗಿದ್ದರು. ಅವರ ಅವಧಿಯಲ್ಲಿ ಗ್ರಾಮ ಪಂಚಾಯತ್‌ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ಸಕಾಲ ಯೋಜನೆಯಲ್ಲಿ ಪ್ರಥಮ ಸ್ಥಾನ, ಕೋವಿಡ್‌ ಲಸಿಕೆ ವಿತರಣೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆಯಲು ಕಾರಣವಾಗಿದೆ.

ಇಷ್ಟೆಲ್ಲಾ ಉತ್ತಮ ಕೆಲಸಗಳನ್ನು ಮಾಡಿದ ಜಿಲ್ಲಾಧಿಕಾರಿ ಜಗದೀಶ್‌ ಅವರಿಗೆ ಟೀಕೆಗಳೇನು ಬಿಟ್ಟು ಹೋಗಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ. ಕೊರೋನಾ ಸಮಯದಲ್ಲಿ ಮಾಸ್ಕ್‌ ಧಾರಣೆ ಮತ್ತು ಕೋವಿಡ್‌ ನಿಯಮಗಳ ವಿಚಾರದಲ್ಲಿ ಅನಗತ್ಯ ಚರ್ಚೆ ಮತ್ತು ಟೀಕೆಗೆ ಗುರಿಯಾಗಿದ್ದರು. ಜನಪ್ರತಿನಿಧಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರಿಂದ ವಿರೋಧ ಪಕ್ಷದ ಟೀಕೆಗೆ ಕೂಡ ಗುರಿಯಾಗಿದ್ದರು. ಎಲ್ಲದರ ನಡುವೆ ಪ್ರಶಂಸೆ ಮತ್ತು ಟೀಕೆಗಳ ನಡುವೆ ಎರಡು ವರ್ಷಗಳ ಕಾಲ ಜಿಲ್ಲೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ.


Spread the love