ಉಡುಪಿ ನಗರ ಸಭಾ ಅಧಿಕಾರಿಗಳಿಂದ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ

Spread the love

ಉಡುಪಿ ನಗರ ಸಭಾ ಅಧಿಕಾರಿಗಳಿಂದ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ

ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಪೌರಯುಕ್ತರಿಗೆ ಸಂಚಾರಿ ಪೋಲಿಸರು ಮಾಹಿತಿ ನೀಡಿದ ಮೇರೆಗೆ ನಗರದಾದ್ಯಂತ ಗುರುವಾರ ಪೌರಾಯುಕ್ತರ ನೇತೃತ್ವದಲ್ಲಿ ನಗರಸಭೆಯ ಅಧಿಕಾರಿಗಳು ದಾಳಿ ನಡೆಸಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದರು.

ಉಡುಪಿ ಸರ್ವಿಸ್ ಬಸ್ ನಿಲ್ದಾಣ ಹಾಗೂ ಸಿಟಿ ಬಸ್ ನಿಲ್ದಾಣದ ಸುತ್ತ ಮುತ್ತಲಿನ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಚಪ್ಪಲಿ, ಬಟ್ಟೆ, ಹೂವು, ಹಣ್ಣು, ತಿಂಡಿ ಸಹಿತ ವಿವಿಧ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸಲಾಯಿತು. ಅದೇ ರೀತಿ ಫುಟ್‌ಪಾತ್‌ನಲ್ಲಿ ಅಂಗಡಿ ಸಾಮಾನುಗಳನ್ನು ಇರಿಸಿ ವ್ಯಾಪಾರ ಮಾಡುತ್ತಿರುವವರ ವಿರುದ್ಧವೂ ಕ್ರಮ ಜರಗಿಸಲಾಯಿತು.

ತೆರವುಗೊಳಿಸಲು ಒಪ್ಪದ ಬೀದಿ ಬದಿ ವ್ಯಾಪಾರಿಗಳ ಸೊತ್ತುಗಳನ್ನು ನಗರಸಭೆ ಸಿಬ್ಬಂದಿಗಳೇ ತೆರವುಗೊಳಿಸಿ ವಶಕ್ಕೆ ಪಡೆದುಕೊಂಡರು. ಪ್ಲಾಸ್ಟಿಕ್ ಚೀಲಗಳನ್ನು ಬಳಕೆ ಮಾಡುತ್ತಿದ್ದ ಹಲವು ಅಂಗಡಿಗಳಿಗೆ ಸ್ಥಳದಲ್ಲಿಯೇ ದಂಡ ವಿಧಿಸ ಲಾಯಿತು.

ನಂತರ ಮಾತನಾಡಿದ ಪೌರಾಯುಕ್ತ ಉದಯ್ ಕುಮಾರ್ ನಗರದಾದ್ಯಂತ ನಿರಂತರ ಕಾರ್ಯಚರಣೆ ನಡೆಸಿ ಅನಧಿಕೃತ ಅಂಗಡಿಗಳನ್ನು, ನಿಯಮ ಪಾಲಿಸಿದ ಅಂಗಡಿಗಳಿಗೆ ದಂಡ ವಿಧಿಸುತ್ತೇವೆ. ಸರಕಾರಿ ರಸ್ತೆಯಲ್ಲಿ ಅಂಗಡಿಯವರು ನೋ ಪಾರ್ಕಿಂಗ್ ಬೋರ್ಡ್ ಹಾಕಿದರೇ ದಂಡ ವಿಧಿಸುತ್ತೇವೆ. ಅದನ್ನು ಧಿಕ್ಕರಿಸಿ ಪುನರಾವರ್ತಿಸಿದರೇ ಅಂಗಡಿಯ ಪರವಾನಿಗೆಯನ್ನು ರದ್ದು ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಡಾ.ಉದಯ ಶೆಟ್ಟಿ, ಅಧಿಕಾರಿಗಳಾದ ಧನಂಜಯ್, ಕರುಣಾಕರ್, ಸಂಚಾರ ಪೊಲೀಸ್ ಠಾಣೆಯ ಎಸ್ಸೈ ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.


Spread the love