ಉಡುಪಿ: ಪೋಷಕರಿಂದ ಹಣ ವಸೂಲಿ ಮಾಡಲು ಅಪಹರಣದ ನಾಟಕವಾಡಿದ ಮಗನ ಬಂಧನ 

Spread the love

ಉಡುಪಿ: ಪೋಷಕರಿಂದ ಹಣ ವಸೂಲಿ ಮಾಡಲು ಅಪಹರಣದ ನಾಟಕವಾಡಿದ ಮಗನ ಬಂಧನ 
 

ಉಡುಪಿ: ಮೋಜು ಮಸ್ತಿಗಾಗಿ ಪೋಷಕರಿಂದಲೇ ಹಣ ವಸೂಲಿ ಮಾಡಲು ಮಗ ತನ್ನ ಅಪಹರಣದ ನಾಟಕವಾಡಿದ್ದು, ಇದನ್ನು ಬೇಧಿಸಿರುವ ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ. ಈ ಅಪರೂಪದ ಘಟನೆ ಉಡುಪಿಯಲ್ಲಿ ಜೂ.27ರಂದು ನಡೆದಿದೆ.

ಬಂಧಿತ ಆರೋಪಿಯನ್ನು ವರುಣ್‌ ನಾಯಕ್‌ ಎಂದು ಗುರುತಿಸಲಾಗಿದೆ

ಈತ ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಸರಕಾರಿ ಶಾಲೆಯ ಶಿಕ್ಷಕಿ ದಂಪತಿ ಪುತ್ರ. ತನ್ನ ಮಗನನ್ನು ಯಾರೋ ಅಪಹರಣ ಮಾಡಿ ಐದು ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ವರುಣ್ ತಂದೆ ತಾಯಿ ಜೂ.26ರಂದು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಅಪಹರಣ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೆತ್ತಿಕೊಂಡರು.

ದೂರು ದಾಖಲಿಸಿಕೊಂಡ ನಗರ ಠಾಣೆ ಪೊಲೀಸ್ ಅಧಿಕಾರಿಗಳು ಮೇಲಾಧಿಕಾರಿಗಳ ಸೂಚನೆಯಂತೆ ಯುವಕನ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಯುವಕನ ಮೊಬೈಲ್ ಲೊಕೇಷನ್ ಪತ್ತೆ ಮಾಡುವಾಗ ಅದು ಗೋವಾದಲ್ಲಿರುವುದು ಗೊತ್ತಾಗಿದೆ ಕೂಡಲೇ ಗೋವಾಕ್ಕೆ ಇಬ್ಬರು ಸಿಬ್ಬಂದಿಗಳನ್ನು ಕಳುಹಿಸಿಕೊಡಲಾಯಿತು, ಈ ವೇಳೆ ಮೊಬೈಲ್ ಲೊಕೇಷನ್ ಪರಿಶೀಸಿ ಆ ಸ್ಥಳಕ್ಕೆ ಹೋದಾಗ ಪೊಲೀಸರಿಗೆ ಶಾಕ್ ಆಗಿತ್ತು, ಆದರೆ ಅಪಹರಣಕ್ಕೊಳಗಾಗಿದ್ದೇನೆ ಎಂದಿದ್ದ ಯುವಕ ತನ್ನ ಗೆಳೆಯರೊಂದಿಗೆ ಗೋವಾದ ಕ್ಯಾಸಿನೋ ಒಂದರಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ.

ಬಳಿಕ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಿಸಿದಾಗ ತಾನು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಸರಿಯಾದ ಕೆಲಸವಿಲ್ಲದೆ ತನ್ನ ಗೆಳೆಯರೊಂದಿಗೆ ಮೋಜು ಮಸ್ತಿ ಮಾಡಲು ಕೈಯಲ್ಲಿ ಹಣವಿಲ್ಲದಿದ್ದಾಗ ತಲೆಗೆ ಬಂದಿದ್ದು ತನ್ನ ಪೋಷಕರ ಬಳಿ ಇರುವ ಹಣವನ್ನು ಹೇಗಾದರೂ ಮಾಡಿ ಲಪಟಾಯಿಸುವ ಉದ್ದೇಶದಿಂದ ನಾನು ಅಪಹರಣದ ನಾಟಕವಾಡಿ ನನ್ನದೇ ಮೊಬೈಲ್ ನಿಂದ ತಾಯಿಗೆ ಕರೆ ಮಾಡಿ ನನ್ನನ್ನು ಯಾರೋ ಅಪಹರಿಸಿದ್ದಾರೆ ಅವರು ಐದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಅಲ್ಲದೆ ಹಣ ನೀಡದಿದ್ದಲ್ಲಿ ನನ್ನನ್ನು ಕೊಲೆ ಮಾಡುತ್ತಾರೆ ಎಂದು ಅಳುತ್ತಾ ಹೇಳಿದೆ ಎಂದು ತನ್ನ ತಪ್ಪನ್ನು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.

ಪೋಷಕರ ಹಣ ಎಗರಿಸುವ ಉದ್ದೇಶ ಹಾಗೂ ಪೊಲೀಸರ ಸಮಯವನ್ನು ವ್ಯರ್ಥಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಯುವಕನ ವಿರುದ್ಧ ಕ್ರಮ ಕೈಗೊಂಡಿದ್ದು ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಯುವಕನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.


Spread the love