ಉಡುಪಿ: ಮತ್ತೆ ಎರಡು ಪೋಕ್ಸೋ ಪ್ರಕರಣದಲ್ಲಿ ಆರೋಪಿ ಚಂದ್ರ ಕೆ ಹೆಮ್ಮಾಡಿಗೆ 10 ವರ್ಷ ಜೈಲು ಶಿಕ್ಷೆ

Spread the love

ಉಡುಪಿ: ಮತ್ತೆ ಎರಡು ಪೋಕ್ಸೋ ಪ್ರಕರಣದಲ್ಲಿ ಆರೋಪಿ ಚಂದ್ರ ಕೆ ಹೆಮ್ಮಾಡಿಗೆ 10 ವರ್ಷ ಜೈಲು ಶಿಕ್ಷೆ

ಉಡುಪಿ: ಶಾಲಾ ಬಾಲಕರಿಗೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೊ ಪ್ರಕರಣದಡಿಯಲ್ಲಿ ಜೈಲಿನಲ್ಲಿರುವ ಕುಂದಾಪುರದ ಚಂದ್ರ ಕೆ ಹೆಮ್ಮಾಡಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯ ಮತ್ತೆರಡು ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಜೂನ್ ತಿಂಗಳಲ್ಲಿ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018ರ 14 ವರ್ಷ ಪ್ರಾಯದ ಬಾಲಕನನ್ನು ಚಂದ್ರ ಹೆಮ್ಮಾಡಿ, ಜಲಪಾತದ ಫೋಟೋ ತೆಗೆಯಲು ಇದೆ ಎಂದು ಹೇಳಿ ಕಾಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಆರೋಪದಲ್ಲಿ ಚಂದ್ರ ಹೆಮ್ಮಾಡಿಯನ್ನು ಬೈಂದೂರು ಪೊಲೀಸರು 2018ರ ನ.28ರಂದು ಬಂಧಿಸಿದ್ದರು. ಆಗಿನ ಬೈಂದೂರು ಪೊಲೀಸ್ ನಿರೀಕ್ಷಕ ಪರಮೇಶ್ವರ್ ಆರ್. ಗುನಗ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಒಟ್ಟು 21 ಸಾಕ್ಷಿಗಳ ಪೈಕಿ 14 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ನೊಂದ ಬಾಲಕರು ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗೆ ನ್ಯಾಯಾಧೀಶ ಶ್ರೀನಿವಾಸ ಸುವರ್ಣ 10 ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು.

ಇನ್ನೊಂದು ಪ್ರಕರಣದಲ್ಲಿ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ಮೂರು ವರ್ಷ ಕಠಿಣ ಶಿಕ್ಷೆ ಮತ್ತು ಒಂದು ಸಾವಿರ ರೂ. ದಂಡ ವಿಧಿಸಲಾಗಿದೆ. ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.


Spread the love