
ಉಡುಪಿ: ಮುಂದುವರೆದ ಮಳೆ ಆರ್ಭಟ, ಮನೆಗಳು ಜಲಾವೃತ, ಜನರ ಸ್ಥಳಾಂತರ
ಉಡುಪಿ: ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಹಾಮಳೆ ಗುರುವಾರ ಕೂಡ ಮುಂದುವರೆದಿದ್ದು ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಉಡುಪಿ ನಗರವ್ಯಾಪ್ತಿಯಲ್ಲಿ ತಗ್ಗು ಪ್ರದೇಶದ ಮನೆಗಳೂ ಸಂಪೂರ್ಣ ಜಲಾವೃತಗೊಂಡಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕೆಲಸ ನಡೆಯುತ್ತಿದೆ.
ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ, ಬೈಲಕೆರೆ, ಮಠದಬೆಟ್ಟು, ಬನ್ನಂಜೆ, ತೆಂಕಪೇಟೆ ಪ್ರದೇಶದಲ್ಲಿ ಮನೆ ಅಂಗಡಿಗಳಿಗೆ ನೆರೆ ನೀರು ನುಗ್ಗಿದೆ. ಅಲ್ಲದೆ ಭಾರಿ ಮಳೆಗೆ ಕೃಷಿ ಭೂಮಿ ಕೂಡ ಸಂಪೂರ್ಣ ಜಲಾವೃತಗೊಂಡಿದ್ದು ನೆರೆ ಹೆಚ್ಚುವ ಸಂಭವ ಕೂಡ ಇದೆ.
ವಿಪರೀತ ಮಳೆಯಿಂದಾಗಿ ಕೃಷ್ಣಮಠ ಪಾರ್ಕಿಂಗ್ ಆಸುಪಾಸಿನ ಪ್ರದೇಶಗಳಾದ ಬೈಲಕರೆ ಹಾಗೂ ಕಲ್ಸಂಕದ ಹತ್ತಿರದ ಮನೆಗಳು ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್, ಸಹಾಯಕ ಅಗ್ನಿಶಾಮಕ ದಳ ಅಧಿಕಾರಿ ಮೀರ್ ಮೊಹ್ಮದ್ ಗೌಸ್ ಹಾಗೂ ಸಿಬ್ಬಂದಿಗಳು ಉಡುಪಿ ಅಗ್ನಿಶಾಮಕ ಠಾಣೆ ಇವರ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡುವ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್, ಕುಂಜಿಬೆಟ್ಟು ನಗರಸಭಾ ಸದಸ್ಯರಾದ ಗಿರೀಶ್ ಅಂಚನ್, ಮಾಜಿ ನಗರಸಭಾ ಸದಸ್ಯರಾದ ಶಶಿರಾಜ್ ಕುಂದರ್, ಆರ್.ಕೆ ರಮೇಶ್ ಪೂಜಾರಿ, ಶಿವಳ್ಳಿ ಗ್ರಾಮ ಲೆಕ್ಕಿಗರಾರ ಪ್ರಮೋದ್ ಹಾಗೂ ಪ್ರದೀಪ್ ಶೇರಿಗಾರ್, ಸುನಿಲ್ ಬೈಲಕರೆ, ಸಂದೇಶ್ ದೇವಾಡಿಗ, ಪ್ರಣಮ್, ಸುಹಾಸ್, ಸಂಪತ್, ರಾಘವೇಂದ್ರ ಹಾಗೂ ಸಂಜಯ್ ಆಚಾರ್ಯ ಅವರು ಉಪಸ್ಥಿತರಿದ್ದು ಸಹಾಯಹಸ್ತ ನೀಡಿದರು.
ವ್ಯಾಪಕ ಮಳೆ ಮುಂದುವರೆದ ಹಿನ್ನಲೆಯಲ್ಲಿ ಈಗಾಗಲೇ ಉಡುಪಿ ಜಿಲ್ಲೆಯ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಕೂರ್ಮರಾವ್ ಅವರು ರಜೆ ಘೋಷಿಸಿ ಆದೇಶ ಹೊರಡಸಿದ್ದಾರೆ.