ಉಡುಪಿ: ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಫಿಕ್ಸ್ – ಕಗ್ಗಂಟಾಗಿಯೇ ಉಳಿದ ಉಡುಪಿ, ಕಾರ್ಕಳ ಕ್ಷೇತ್ರ

Spread the love

ಉಡುಪಿ: ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಫಿಕ್ಸ್ – ಕಗ್ಗಂಟಾಗಿಯೇ ಉಳಿದ ಉಡುಪಿ, ಕಾರ್ಕಳ ಕ್ಷೇತ್ರ

  • ಮಾಜಿ ಸಚಿವ ಜೆಪಿ ಹೆಗ್ಡೆಗೆ ಕಾಂಗ್ರೆಸ್ನಿಂದ ಗಾಳ – ಬಿಜೆಪಿಯ ಭದ್ರಕೋಟೆಯನ್ನು ಒಡೆಯಲಿದೆಯಾ ಕೈ ಪಾಳಯ?

ಉಡುಪಿ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿಯ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಕಾಂಗ್ರೆಸ್ ಪಕ್ಷವು ಶನಿವಾರ ಬಿಡುಗಡೆಗೊಳಿಸಿದೆ. ಈ ಬಾರಿಯ ಗೆಲುವಿನ ಲೆಕ್ಕಾಚಾರ ಹಾಕಿರುವ ಬಹುತೇಕ ಈ ಹಿಂದೆ ಟಿಕೆಟ್ ನೀಡಿದ್ದ ಅಭ್ಯರ್ಥಿಗಳಿಗೆ ಈ ಬಾರಿಯೂ ಮಣೆ ಹಾಕಲಾಗಿದೆ.

ನಿರೀಕ್ಷೆಯಂತೆ ಕಾಪು ವಿಧಾನಸಭಾಕ್ಷೇತ್ರಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಬೈಂದೂರು ಕ್ಷೇತ್ರಕ್ಕೆ ಮಾಜಿ ಶಾಸಕ ಗೋಪಾಲ ಪೂಜಾರಿ ಮತ್ತು ಕುಂದಾಪುರ ಕ್ಷೇತ್ರಕ್ಕೆ ಗುತ್ತಿಗೆದಾರ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರಿಗೆ ಅವಕಾಶ ನೀಡಿದೆ. ಕಾಂಗ್ರೆಸ್ಗೆ ಕಗ್ಗಂಟಾಗಿ ಉಳಿದಿದ್ದ ಉಡುಪಿ ಮತ್ತು ಕಾರ್ಕಳಕ್ಕೆ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ರಿವೀಲ್ ಮಾಡದೇ ಇರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಊಹಾಪೋಹಗಳಿಗೆ ಎಡೆಮಾಡಿಕಟ್ಟಿದೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಆಡಳಿತರೂಢ ಬಿಜೆಪಿ ನಡುವೆ ಜಿದ್ದಾಜಿದ್ದಿನ ಹಣಾಹಣಿ ಏರ್ಪಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲೂ ರಾಜಕೀಯ ನಾಯಕರ ಈ ಕಸರತ್ತು ಮುಂದುವರೆದಿದೆ. ಒಟ್ಟು ಐದು ವಿಧಾನಭಾ ಕ್ಷೇತ್ರಗಳಿರುವ ಉಡುಪಿ ಜಿಲ್ಲೆ ಬಿಜೆಪಿಯ ಭದ್ರಕೋಟೆ. 2018ರ ಚುನಾವಣೆಯಲ್ಲಿ ಇಲ್ಲಿನ ಐದೂ ಕ್ಷೇತ್ರಗಳನ್ನು ಕೇಸರಿ ಪಾಳಯ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ ಈ ಬಾರಿ ಆಡಳಿತ ವಿರೋಧಿ ಅಲೆಯಿಂದಾಗಿ ಕಾಂಗ್ರೆಸ್ಗೆ ಲಾಭವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಉಡುಪಿಯಲ್ಲೂ ಭಾರೀ ಪೈಪೋಟಿ:
ಕಳೆದ ಬಾರಿ ಉಡುಪಿ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ಪ್ರಭಾವಿ ಸಚಿವರಾಗಿಯೂ ಗುರುತಿಸಿಕೊಂಡಿದ್ದರು. ಈ ಬಾರಿ ಅವರು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಅವರ ಸ್ಥಾನವನ್ನು ತುಂಬುವ ಸಮರ್ಥ ಅಭ್ಯರ್ಥಿ ಯಾರು ಎನ್ನುವುದು ಪ್ರಶ್ನೆಯಾಗಿದೆ. ಈಗಾಗಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಮಾಜಿ ಜಿಪಂ ಸದಸ್ಯ ದಿವಾಕರ ಕುಂದರ್, ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್ ಮತ್ತು ಅಮೃತ್ ಶೆಣೈ ಅವರು ಟಿಕೇಟ್ ಆಕಾಂಕ್ಷಿಗಳಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು ಕೊನೆಯ ಹಂತದಲ್ಲಿ ಚುನಾವಣಾ ಸಮಿತಿ ಎರಡು ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್ ಗೆ ಪಟ್ಟಿಯನ್ನು ರವಾನಿಸಿದೆ ಎನ್ನಲಾಗಿದೆ.

ಕಾರ್ಕಳದಲ್ಲಿ ಮುನಿಯಾಲು ಫೈನಲ್?
ಕಾರ್ಕಳದಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಮಂಜುನಾಥ ಪೂಜಾರಿ, ಮಾಜಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಬಿಲ್ಲಾ ನಾಯಕ ಡಿ ಆರ್ ರಾಜು, ಹೊಟೇಲ್ ಉದ್ಯಮಿ ಸುರೇಂದ್ರ ಶೆಟ್ಟಿ ಅರ್ಜಿ ಸಲ್ಲಿಸಿದ್ದು, ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಗುತ್ತಿಗೆದಾರರಾದ ಮುನಿಯಾಲು ಉದಯ್ ಕುಮಾರ್ ಹೆಸರು ಕೂಡ ಕಾರ್ಕಳ ಕ್ಷೇತ್ರಕ್ಕೆ ಕೇಳಿ ಬರುತ್ತಿದೆ. ಕೊನೆಯದಾಗಿ ಬಿಜೆಪಿ ಅಭ್ಯರ್ಥಿ ಪ್ರಭಾವಿ ಸಚಿವ ಸುನೀಲ್ ಕುಮಾರ್ ಅವರಿಗೆ ಸಮರ್ಥ ಎದುರಾಳಿ ಯಾರು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಿಂದ ಉಡುಪಿ ವಿಧಾನಸಭಾ ಕ್ಷೇತ್ರ ಸಂಪೂರ್ಣವಾಗಿ ಕಾಂಗ್ರೆಸ್ ಹಿಡಿತ ಕಳೆದುಕೊಂಡಿದ್ದು ಅದನ್ನು ಮತ್ತೆ ಹಿಡಿತಕ್ಕೆ ಪಡೆಯುವಲ್ಲಿ ಎಲ್ಲಾ ಆಕಾಂಕ್ಷಿಗಳು ತಮ್ಮ ಮಟ್ಟಿನ ಪ್ರಯತ್ನ ನಡೆಸುತ್ತಿದ್ದರೂ ಕೂಡ ಬಿಜೆಪಿಯ ಈ ಬಾರಿಯ ಅಭ್ಯರ್ಥಿ ಎಂದು ಹೇಳಲಾಗುವ ಪ್ರಸ್ತುತ ಶಾಸಕ ರಘುಪತಿ ಭಟ್ ಅವರನ್ನು ಸೋಲಿಸುವುದು ಅಷ್ಟೊಂದು ಸುಲಭದ ವಿಚಾರವಲ್ಲ ಎನ್ನಲಾಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಪ್ರಮೋದ್ ಮಧ್ವರಾಜ್ ಅವರೂ ಕೂಡ ರಘುಪತಿ ಭಟ್ ಅವರ ಜನಪ್ರಿಯತೆ ಹಾಗೂ ಪ್ರಬಲ ಹಿಂದುತ್ವದ ವಿಚಾರದಲ್ಲಿ ಸೋಲಬೇಕಾಯಿತು. ಈ ಬಾರಿ ಉಡುಪಿ ಕ್ಷೇತ್ರ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಜಾಬ್ ವಿಚಾರ ಸುದ್ದಿಗೆ ಕಾರಣವಾದರೂ ಕೂಡ ಅದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಪ್ರಸ್ತುತ ಶಾಸಕ ರಘುಪತಿ ಭಟ್ ಪ್ರಯತ್ನ ಮಾಡಿದ್ದು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಕೂಡ ಅವರ ಬೆಂಬಲಕ್ಕೆ ನಿಲ್ಲುತ್ತಾರೆ ಎನ್ನುವುದು ಅವರ ವಿಶ್ವಾಸವಾಗಿದೆ.

ಉಡುಪಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಎನ್ನುವುದು ಕೊನೆಯ ಕ್ಷಣಕ್ಕೆ ಘೋಷಣೆಯಾದರೆ ಇಡೀ ಕ್ಷೇತ್ರವನ್ನು ಹೊಸ ಅಭ್ಯರ್ಥಿ ಪರಿಚಯ ಮಾಡಿಕೊಳ್ಳುವುದು ಕಷ್ಟದ ಕೆಲಸವಾಗಿದೆ. ಎಲ್ಲಾ ಆಕಾಂಕ್ಷಿಗಳಿಗೆ ಕ್ಷೇತ್ರದ ಪರಿಚಯವಿದ್ದರೂ ಕೂಡ ಗ್ರಾಮೀಣ ಭಾಗದ ಮತದಾರರನ್ನು ತಲುಪುವಲ್ಲಿ ಯಾರೂ ಕೂಡ ಸಫಲರಾಗಿಲ್ಲ. ಕ್ಷೇತ್ರದಲ್ಲಿ ಅತೀ ಹೆಚ್ಚು ಒಡಾಟ ಮಾಡಿಕೊಂಡು ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ಕಾಂಗ್ರೆಸಿಗರ ಅಪೇಕ್ಷೆಯಾಗಿದ್ದು ಕೊನೆ ಕ್ಷಣದಲ್ಲಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎನ್ನುವುದು ಕುತೂಹಲದ ವಿಚಾರವಾಗಿದೆ.

ಕಾರ್ಕಳದಲ್ಲಿ ಗೋಪಾಲ ಭಂಡಾರಿಯವರ ನಿಧನದ ಬಳಿಕ ಸೂಕ್ತ ಅಭ್ಯರ್ಥಿಗೆ ಹುಡಕಾಟ ನಡೆಸಿರುವ ಕಾಂಗ್ರೆಸ್ ಈ ಬಾರಿ ಅಳೆದು ತೂಗಿ ಟಿಕೇಟ್ ನೀಡಲಿದೆ ಎನ್ನಲಾಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಈಗಾಗಲೇ ಉತ್ಸವ, ರಿಪೋರ್ಟ್ ಕಾರ್ಡ್ ಎಂದು ಪ್ರಚಾರದಲ್ಲಿರುವ ಸರಕಾರದ ಪ್ರಭಾವಿ ಸಚಿವ ಸುನೀಲ್ ಕುಮಾರ್ ಅವರಿಗೆ ಎದುರಾಳಿ ಆಗಬೇಕಾದವರು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಈಗಾಗಲೇ ಸುನೀಲ್ ಕುಮಾರ್ ಅವರ ಗುರು ಪ್ರಮೋದ್ ಮುತಾಲಿಕ್ ಅವರು ಪಕ್ಷೇತರರಾಗಿ ಸ್ಪರ್ಧಿಸುವ ಸೂಚನೆ ನೀಡಿದ್ದು ಇದರಿಂದ ಯಾರಿಗೆ ಲಾಭವಾಗಲಿದೆ ಎನ್ನುವುದು ಕಾದು ನೋಡಬೇಕಾಗಿದೆ.

ಬೈಂದೂರಿನಲ್ಲಿ ಕಾಂಗ್ರೆಸ್ ಬಲಿಷ್ಠ :
ಸದ್ಯ ಬಿಜೆಪಿ ತೆಕ್ಕೆಯಲ್ಲಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಕೆ. ಗೋಪಾಲ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ಬೈದೂರು ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಅಧ್ಯಾಯ ಆರಂಭಿಸಿದ್ದ ಕೆ. ಗೋಪಾಲ ಪೂಜಾರಿ 1999 ಮತ್ತು 2004ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದರು. ಬಳಿಕ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆ. ಗೋಪಾಲ ಪೂಜಾರಿಗೆ 2008ರಲ್ಲಿ ಬಿಜೆಪಿ ಸೋಲಿನ ರುಚಿ ತೋರಿಸಿ ಬಿಜೆಪಿ ಅಭ್ಯರ್ಥಿ ಕೆ. ಲಕ್ಷ್ಮೀನಾರಾಯಣ ವಿರುದ್ಧ ಕೆ. ಗೋಪಾಲ ಪೂಜಾರಿ ಸೋಲು ಕಂಡರು. ಮತ್ತೆ 2013ರ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದಲೇ ಸ್ಫರ್ಧಿಸಿದ್ದ ಗೋಪಾಲ ಪೂಜಾರಿ 82,277 ಮತಗಳನ್ನು ಪಡೆದು ಬಿಜೆಪಿಯ ಸುಕುಮಾರ ಶೆಟ್ಟಿ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು. ಆದರೆ 2018ರ ಚುನಾವಣೆಯಲ್ಲಿ ಗೋಪಾಲ ಪೂಜಾರಿ ಮತ್ತೆ ಸೋಲು ಕಂಡರು. ಸೋಲಿನ ಬಳಿಕ ಕಂಗೆಡದ ಕೆ. ಗೋಪಾಲ ಪೂಜಾರಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಾ 2023ರ ಚುನಾವಣೆಯ ಸಿದ್ಧತೆ ಆರಂಭಿಸಿದ್ದರು. ಸದ್ಯ ನಿರೀಕ್ಷಿಸಿದಂತೆ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಉಡುಪಿಯ ಎಲ್ಲಾ ಕ್ಷೇತ್ರಕ್ಕಿಂತ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಉತ್ತಮವಾಗಿದೆ. ಮಾಜಿ ಶಾಸಕ ಗೋಪಾಲ ಪೂಜಾರಿಯವರ ಬಗ್ಗೆ ಜನರಿಗೆ ಅನುಕಂಪವಿದ್ದು, ಈ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಗೋಪಾಲ ಪೂಜಾರಿ ಗೆಲುವಿನ ಲೆಕ್ಕಾಚಾರ ಇನ್ನು ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಹಾಲಿ ಶಾಸಕರನ್ನು ಬದಲಾವಣೆ ಮಾಡಬೇಕು ಎನ್ನುವ ಕೂಗು ಜೋರಾಗಿ ಕೇಳಿ ಬರುತ್ತಿದೆ. ಶಾಸಕರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅವರಿಗೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪಗಳು ಜೋರಾಗಿದ್ದು, ಈ ಬಾರಿ ಅಭ್ಯರ್ಥಿಯನ್ನು ಬದಲಿಸಿ ಹೊಸ ಮುಖಕ್ಕೆ ಅವಕಾಶ ಕೊಡುವಂತೆ ಬಹುತೇಕ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಸುಕುಮಾರ್ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದರೆ ಹಾಗೂ ಹೊಸ ಮುಖಕ್ಕೆ ಅವಕಾಶ ನೀಡಿದರೂ ಎರಡೂ ಅಂಶಗಳು ಕಾಂಗ್ರೆಸ್ ಗೆಲುವಿಗೆ ಸಹಾಯವಾಗಲಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಈ ಬಾರಿ ತಮ್ಮ ಕೈತಪ್ಪಿರುವ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ಪಡೆದುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ನಿರಂತರ ಜನಸಂಪರ್ಕದಲ್ಲಿರುವ ಸೊರಕೆ:
ಕಾಪು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಈ ಬಾರಿ ಬದಲಾವಣೆ ಆಗಲಿದೆ ಎಂಬ ಮುನ್ಸೂಚನೆ ದೊರೆತ ಹಿನ್ನಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿದೆ. ಹೀಗಾಗಿ ಕಾಂಗ್ರೆಸ್ ತನ್ನ ಅನುಭವಿ ನಾಯಕರನ್ನು ಚುನಾವಣಾ ಕಣಕ್ಕಿಳಿಸುವ ತಂತ್ರಗಾರಿಕೆಯನ್ನು ಮಾಡಿದ್ದು, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆಗೆ ಸ್ಪರ್ಧೆಗೆ ಅವಕಾಶ ನೀಡಿದೆ. ವಿನಯ್ ಕುಮಾರ್ ಸೊರಕೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 1985 ಹಾಗೂ 1989ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದವರು. ಬಳಿಕ 2013ರಲ್ಲಿ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಕೆಲಕಾಲ ಸಚಿವರಾಗಿದ್ದರು. ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ 63,976 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಲಾಲಾಜಿ ಮಂಡನ್ ವಿರುದ್ಧ ಸೋಲು ಅನುಭವಿಸಿದರು. ಸೋಲಿನ ಬಳಿಕ ತೆರೆ ಮರೆಗೆ ಸರಿಯದ ವಿನಯ್ ಕುಮಾರ್ ಸೊರಕೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಾ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನರ ಸಂಪರ್ಕದಲ್ಲಿ ಇರುವ ಮೂಲಕ ಈ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಾಪುವಿನಲ್ಲಿ ಎಸ್ಡಿಪಿಐ ಸಕ್ರೀಯವಾಗಿದ್ದು, ಕಾಂಗ್ರೆಸ್ ಪಾಲಿಗಿದ್ದ ಅಲ್ಪ ಸಂಖ್ಯಾತ ಮತಗಳು ಎಸ್ಡಿಪಿಐ ಪಾಲಾಗುವ ಸಾಧ್ಯತೆ ಕೂಡ ಇದೆ. ಕಾಪು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಈ ಬಾರಿ ಬದಲಾವಣೆ ಎನ್ನುವ ಅಂಶಗಳು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸಹಾಯವಾಗುವ ನಿರೀಕ್ಷೆ ಇದೆ. ವಿನಯ್ ಕುಮಾರ್ ಸೊರಕೆ ಈ ಬಾರಿ ಶತಾಯಗತಾಯ ಗೆಲುವು ಸಾಧಿಸಬೇಕು ಎನ್ನುವ ಪ್ರಯತ್ನದಲ್ಲಿದ್ದಾರೆ.

ಜೆಪಿ ಹೆಗ್ಡೆಗೆ ಕಾಂಗ್ರೆಸ್ ಗಾಳ:
ಇನ್ನೊಂದೆಡೆಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ನ ಮಾಜಿ ನಾಯಕ ಜಯಪ್ರಕಾಶ್ ಹೆಗ್ಡೆಯವರನ್ನು ಮರಳಿ ಪಕ್ಷಕ್ಕೆ ಕರೆತರುವ ತಯಾರಿ ನಡೆದಿದೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೆಪಿ ಹೆಗ್ಡೆಯವರನ್ನು ಅಂಪರ್ಕ ಮಾಡಿದ್ದಾರೆ ಎನ್ನುವ ಮಾಹಿತಿಗಳು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ. ಒಂದುವೇಳೆ ಜಯಪ್ರಕಾಶ್ ಹೆಗ್ಡೆಯವರು ಮರಳಿ ಕಾಂಗ್ರೆಸ್ಗೆ ಬಂದರೆ ಅವರನ್ನು ಉಡುಪಿ ಅಥವಾ ಕಾರ್ಕಳ ಅಭ್ಯರ್ಥಿಯಾಗಿ ಘೋಷಿಸುವ ಲೆಕ್ಕಾಚಾರವೂ ಕಾಂಗ್ರೆಸ್ ಪಾಳಯದಲ್ಲಿದೆ.


Spread the love