ಉಡುಪಿ: ವಿದ್ಯಾರ್ಥಿನಿಗೆ ಅರ್ಧ ಗಂಟೆ ತಮ್ಮ ಹುದ್ದೆ ಬಿಟ್ಟು ಕೊಟ್ಟ ಜಿಪಂ ಸಿಇಒ ಡಾ. ನವೀನ್ ಭಟ್!

Spread the love

ಉಡುಪಿ: ವಿದ್ಯಾರ್ಥಿನಿಗೆ ಅರ್ಧ ಗಂಟೆ ತಮ್ಮ ಹುದ್ದೆ ಬಿಟ್ಟು ಕೊಟ್ಟ ಜಿಪಂ ಸಿಇಒ ಡಾ. ನವೀನ್ ಭಟ್!

ಉಡುಪಿ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಪ್ರತಿಭಾನ್ವಿತ ಬಾಲಕಿಯರಿಗೆ ಉಡುಪಿ ಜಿಲ್ಲಾ ಪಂಚಾಯತ್ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಉತ್ತಮ ಪಾಲ್ಗೊಳ್ಳುವಿಕೆ ಹಾಗೂ ಸಾಮಾಜಿಕ ಕಳಕಳಿಯುಳ್ಳ ಹಲವು ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಯೋರ್ವಳಿಗೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ|ನವೀನ್ ಭಟ್ ಅರ್ಧ ಗಂಟೆ ತಮ್ಮ ಸಿಇಓ ಜಿಪಂ ಉಡುಪಿ ಹುದ್ದೆ ಬಿಟ್ಟು ಕೊಟ್ಟು ಅಧಿಕಾರ ನಿರ್ವಹಣೆಯ ಪಾಠ ಹೇಳಿಸಿಕೊಂಡಿದ್ದಾರೆ.

ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ 10 ನೇ ತರಗತಿಯ ವಿದ್ಯಾರ್ಥಿನಿ ಕು|ವರ್ಷಾಳಿಗೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ|ನವೀನ್ ಭಟ್ ಅರ್ಧ ಗಂಟೆ ತಮ್ಮ ಸಿಇಓ ಜಿಪಂ ಉಡುಪಿ ಹುದ್ದೆ ಬಿಟ್ಟು ಕೊಟ್ಟು ನೀವು ಈಗ ಯಾವ ಸಾಮಾಜಿಕ ಸುಧಾರಣೆ ಕಾರ್ಯ ಮಾಡಲು ಹೇಳುವಿರಿ ಎಂದು ಕೇಳಿದ್ದಾರೆ.

ಆಗ ಅವಳು ಪ್ಲಾಸ್ಟಿಕ್ ವಿಲೇವಾರಿ, ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಹಾಗೂ ನಿರುದ್ಯೋಗ ನಿವಾರಣೆ ಕುರಿತು ಚರ್ಚಿಸಿದಳು. ವರ್ಷಾಳ ವಿಲ್ಲ ಪ್ರಶ್ನೆಗಳಿಗೆ ಸಿಇಓ ಡಾ.ನವೀನ್ ಭಟ್ ರವರು ಉತ್ತರಗಳನ್ನು ನೀಡಿ ಸಂತುಷ್ಠಗೊಳಿಸಿದರು. ಅವಳ ವಯಸ್ಸು 16 ಇತ್ತು ಎಸ್. ಎಸ್. ಎಲ್. ಸಿ. ತರಗತಿ ಓದುತ್ತಿದ್ದಳು. ಅವಳಿಗೆ ನೀನು ಮುಂದಿನ 10 ವರ್ಷಗಳ ಅವಧಿಯಲ್ಲಿ ಆಯ್.ಎ.ಎಸ್, ಪಾಸಾಗಿ ಇಂತಹದೇ ಹುದ್ದೆಯಲ್ಲಿ ನೀನು ಇರಬೇಕು ಎಂದು ಹೃದಯಪೂರಕವಾಗಿ ಆ ಕುಮಾರಿ ವರ್ಷಾಳಿಗೆ ಹಾರೈಸಿದರು.

ಕಾರ್ಯಾಗಾರ
ಆರಂಭದಲ್ಲಿ ಡಾ. ನವೀನಭಟ್ ಆರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಉಡುಪಿ ಅವರು ಮಕ್ಕಳೊಂದಿಗೆ ಪರಿಚಯ ಮಾಡಿಕೊಂಡು ಅವರು ಉತ್ತಮ ಓದುಗಾರಿಗೆ, ನಿರ್ಧಿಷ್ಟ ಗುರಿ ಇದ್ದು ನಿರಂತರ ಅಧ್ಯಯನ ಕ್ರಮವನ್ನು ರೂಢಿಕೊಂಡರೆ ನೀವು ಬಯಸಿದ ಗುರಿಯನ್ನು ತಲುಪಬಹುದಾಗಿದೆ.

ತದನಂತರ ಕೆ.ಆರ್. ಪಡೇಕರ ಉಪಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ ಮೂರು ಹಂತದ ಆಡಳಿತ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯ ಚಟುವಟಿಕೆಗಳ ಬಗೆಗೆ ತಿಳಿಸಿದರು. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರು. ನಂತರ ಮುಖ್ಯ ಲೆಕ್ಕಾಧಿಕಾರಿಗಳು ಹಣಕಾಸಿನ ವ್ಯವಸ್ಥೆಯ ಬಗೆಗೆ ತಿಳಿಸಿದರು. ತೆರಿಗೆ ಸಂಗ್ರಹ, ಬಳಕೆ ಹಾಗೂ ಯೋಜನೆ ಮಾಡುವ ಕುರಿತು ತಿಳಿಸಿದರು. ಯೋಜನಾ ನಿರ್ದೇಶಕರು ಮಾತನಾಡಿ ಜಿಲ್ಲಾ ಪಂಚಾಯತಿಯಲ್ಲಿ ಬರುವ ವಸತಿ ವ್ಯವಸ್ಥೆಯ ಬಗೆಗೆ ಮಾತನಾಡಿದರು.

ನಂತರ ಶಿಕ್ಷಣ ಇಲಾಖೆಗೆಯ ಉಪನಿರ್ದೇಶಕರ ಕಚೇರಿಗೆ ಎಲ್ಲ ವಿದ್ಯಾರ್ಥಿನಿಯರನ್ನು ಕರೆದುಕೊಂಡು ಹೋಗಿ ಎನ್. ಎಚ್. ನಾಗೂರ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಅವರು ಸಮಗ್ರ ಮಾಹಿತಿಯನ್ನು ಶಿಕ್ಷಣ ಸಚಿವರಿಂದ ಹಿಡಿದು ಶಾಲಾ ಶಿಕ್ಷಕರ ವರೆಗೆ ಇರುವ ಸಾಂಬಸ್ಥಿಕ ರಚನೆಯ ಬಗೆಗೆ ತಿಳಿಸಿದರು. ಅಕ್ಷರ ದಾಸೋಹ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ವಿಭಾಗದಿಂದ ಜಾಹ್ನವಿ, ಪ್ರಭಾಕರ ರವರು ಮಕ್ಕಳಿಗೆ ತಿಳಿಸಿದರು. ಶಿಕ್ಷಣ ಇಲಾಖೆಯ ಪ್ರೋತ್ಸಾಹದಾಯಕ ಯೋಜನೆಗಳ ಪರಿಚಯ ಮಕ್ಕಳಿಗೆ ಮಾಡಿಕೊಡಲಾಯಿತು.

ನಂತರ ಕಾರ್ಮಿಕ ಇಲಾಖೆಯವರು, ಸಮಾಜ ಕಲ್ಯಾಣ ಇಲಾಖೆಯವರು, ಪ್ರವಾಸೋದ್ಯಮ ಇಲಾಖೆಯವರು ಆಗಮಿಸಿ ತಮ್ಮ ಇಲಾಖೆಯ ಕಾರ್ಯಕ್ರಮಗಳ ಕುರಿತು ಹಾಗೂ ಮಕ್ಕಳಿಗೆ ಇರುವ ಸ ಸೌಲಭ್ಯಗಳ ಕುರಿತು ವಿವರಣೆ ನೀಡಿದರು. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಕೊನೆಯಲ್ಲಿ ಸಿಇಓ ಡಾ. ನವೀನ್ ಭಟ್ ಆರ್ ರವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಈ ಸಂವಾದದಲ್ಲಿ ಮಕ್ಕಳು ಸ್ವಚ್ಚತೆಯ ಬಗೆಗೆ, ಚರಂಡಿ ವ್ಯವಸ್ಥೆಯ ಬಗೆಗೆ, ಗ್ರಾಮೀಣ ರಸ್ತೆ ನಿರ್ಮಾಣ, ಕುಡಿಯು ನೀರು ಸೌಲಭ್ಯಗಳ ಬಗೆಗೆ ಪ್ರಶ್ನಿಸಿದರು. ಆಯ್.ಎ.ಎಸ್. ಪರೀಕ್ಷೆ ಪಾಸಾಗಲು ನಾವು ಹೇಗೆ ಓದಬೇಕು ? ಎಂದು ಕೇಳಿದರು. ಯು ಪಿ ಎಸ್ ಸಿ ಪರೀಕ್ಷೆಗೆ ಹೇಗೆ ಸಿದ್ದರಾಗಬೇಕೆಂಬುದನ್ನು ಕೇಳಿದರು. ಈ ಎಲ್ಲ ಹಲವು ಪ್ರಶ್ನೆಗಳು ಸಿ.ಇ.ಓ ರವರು ನಿರರ್ಗಳವಾಗಿ ಉತ್ತರವನ್ನು ನೀಡಿ ವಿದ್ಯಾರ್ಥಿಗಳಿಗೆ ಅತ್ಯಮೂಲ್ಯವಾದ ಮಾಹಿತಿಯನ್ನು ನೀಡಿ ಅವರೆಲ್ಲರಿಗೂ ಸ್ಫೂರ್ತಿಯನ್ನುಂಟು ಮಾಡಿದರು.

ಆರ್. ಶೇಷಪ್ಪ ಉಪನಿರ್ದೇಶಕರು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಡಿಪಿ ಅವರು ಮಕ್ಕಳ ಮತ್ತು ಮಹಿಳೆಯರ ರಕ್ಷಣೆ, ಅವರ ಅಭಿವೃದ್ದಿಗೆ ಇರುವ ವಿವಿಧ ಕಾರ್ಯಕ್ರಮಗಳನ್ನು ವಿಧ್ಯಾರ್ಥಿನಿಯರಿಗೆ ತಿಳಿಸಿಕೊಟ್ಟರು. ಬಾಲ್ಯವಿವಾಹ, ಮಕ್ಕಳ ಮೇಲೆ, ಮಹಿಳೆಯರ ಮೇಲೆ ಆಗುವ ಅತ್ಯಾಚಾರಗಳ ನಿಯಂತ್ರಣವನ್ನು ಹೇಗೆ ಕೈಗೊಳ್ಳುತ್ತೀರಿ ಎಂಬ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.


Spread the love