
ಉಡುಪಿ: ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದು ಕರೆದ ಪ್ರೊಫೆಸರ್!, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್
ಉಡುಪಿ: ಜಿಲ್ಲೆಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾರ್ಥಿಯೊಬ್ಬನನ್ನು ಆ ಕಾಲೇಜಿನ ಪ್ರೊಫೆಸರ್ “ಭಯೋತ್ಪಾದಕ” ಎಂದು ಕರೆದಿದ್ದಾರೆ. ಇದರಿಂದ ಕೋಪಗೊಂಡ ಆ ವಿದ್ಯಾರ್ಥಿಯು ಆ ಪ್ರೊಫೆಸರ್ನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಈ ವಿಡಿಯೋದಲ್ಲಿರುವ ದೃಶ್ಯದಲ್ಲಿಯೇ ಪ್ರೊಫೆಸರ್ ಕ್ಷಮಾಪಣೆಯನ್ನೂ ಕೇಳಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ತರಗತಿ ಕೊಠಡಿಯಲ್ಲಿರುವ ವಿದ್ಯಾರ್ಥಿಯು “ನೀವು ಹೇಗೆ ಇಂತಹ ಹೇಳಿಕೆ ನೀಡುತ್ತೀರಿ?ʼʼ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಆ ಪ್ರೊಫೆಸರ್ “ನಾನು ತಮಾಷೆಗಾಗಿ ಹೇಳಿದೆʼʼ ಎನ್ನುತ್ತಾರೆ. ಆ ವಿದ್ಯಾರ್ಥಿಯು ಆ ಚರ್ಚೆಯನ್ನು ಇನ್ನಷ್ಟು ವಿಸ್ತರಿಸುತ್ತಾನೆ. “26/11 ಘಟನೆಯು ತಮಾಷೆಯಲ್ಲ. ಮುಸ್ಲಿಂ ಆಗಿ ನಾವು ಈ ದೇಶದಲ್ಲಿ ಇಂತಹ ವಿಷಯಗಳನ್ನು ಎದುರಿಸುವುದು ತಮಾಷೆಯಲ್ಲʼʼ ಎಂದು ಹೇಳಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ವಿದ್ಯಾರ್ಥಿಯ ಮಾತಿನಿಂದ ವಿಚಲಿತರಾದ ಪ್ರೊಫೆಸರ್ ಆತನಲ್ಲಿ ಕ್ಷಮಾಪಣೆ ಕೇಳಿ, ನೀನು ನನ್ನ ಮಗನಂತೆ ಎಂದು ಹೇಳುತ್ತಾರೆ. “ನೀವು ನಿಮ್ಮ ಮಗನನ್ನು ಹೀಗೆ ಟ್ರೀಟ್ ಮಾಡುವಿರಾ? ಆತನಿಗೆ ಟೆರರಿಸ್ಟ್ ಎಂಬ ಹಣೆಪಟ್ಟಿ ಹಚ್ಚುವಿರಾ? ಈ ತರಗತಿಯಲ್ಲಿ ಎಲ್ಲರ ಮುಂದೆ ನಿಮ್ಮ ಮಗನನ್ನು ಈ ರೀತಿ ಕರೆಯುವಿರಾ? ಕ್ಷಮಾಪಣೆ ಕೇಳಿದರೆ ಸಾಲದು, ನಿಮ್ಮೊಳಗಿರುವ ಇಂತಹ ಮನಸ್ಥಿತಿ ಬದಲಾಗದುʼʼ ಎಂದು ಆ ವಿದ್ಯಾರ್ಥಿ ಆಕ್ರೋಶ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ಕಾಣಬಹುದು.
ಬಳಿಕ ಆ ಪ್ರೊಫೆಸರ್ ಆ ವಿದ್ಯಾರ್ಥಿಯ ಬಳಿಯಲ್ಲಿ ವೈಯಕ್ತಿಕವಾಗಿಯೂ ಕ್ಷಮಾಪಣೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿದ್ಯಾರ್ಥಿ ಮತ್ತು ಪ್ರೊಫೆಸರ್ ಮಾತುಕತೆಯ ಮೂಲಕ ಈ ವಿವಾದವನ್ನು ಬಗೆಹರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಕಾಲೇಜಿನ ಆಡಳಿತ ಮಂಡಳಿ ಉಪನ್ಯಾಸಕನ ವಿರುದ್ದ ಕ್ರಮ ಕೈಗೊಂಡಿದ್ದು, ಸಂಬಂಧಿತ ಉಪನ್ಯಾಸಕನನ್ನು ಆಮಾನತುಗೊಳಿಸಿ ಆಂತರಿಕ ತನಿಖೆಗೆ ನಿರ್ಧರಿಸಲಾಗಿದೆ ಅಲ್ಲದೆ ವಿದ್ಯಾರ್ಥಿಗೆ ಕೌನ್ಸಿಲಿಂಗ್ ಮೂಲಕ ಸಾಂತ್ವನ ಹೇಳಲಾಗಿದೆ ಎಂದು ತಿಳಿದು ಬಂದಿದೆ.