ಉಡುಪಿ: ಸಮೀಕ್ಷಾ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಮೂವರು ಶಿಕ್ಷಕರ ಅಮಾನತು
ಉಡುಪಿ: ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಮೂವರು ಸಹ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಅಮಾನತುಗೊಂಡವರು — ಉಡುಪಿ ತಾಲೂಕಿನ ಒಳಕಾಡು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರು ಶ್ರೀಮತಿ ಸುರೇಖ ಮತ್ತು ಶ್ರೀಮತಿ ರತ್ನ, ಹಾಗೂ ಉದ್ಯಾವರದ ಎಸ್.ಪಿ. ಪೂರ್ವವಿದ್ಯಾ ಕಾಲೇಜಿನ (ಪ್ರೌಢಶಾಲಾ ವಿಭಾಗ) ಸಹ ಶಿಕ್ಷಕಿ ಪ್ರಭಾ ಬಿ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ರಾಜ್ಯಮಟ್ಟದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಗಣತಿದಾರರಾಗಿ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ನೇಮಕಾತಿ ಆದೇಶ ಪತ್ರಗಳನ್ನು ಅವರು ಸ್ವೀಕರಿಸದೇ ನಿರ್ಲಕ್ಷ್ಯ ತೋರಿದ್ದಾರೆಂದು ವರದಿಯಾಗಿದೆ.
ಆದೇಶ ಪತ್ರ ಸ್ವೀಕರಿಸದ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಹಲವಾರು ಬಾರಿ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಫಲವಾಗಿಲ್ಲ. ಬಳಿಕ ಅವರಿಗೆ ನೋಟಿಸ್ ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ಯಾವುದೇ ಸ್ಪಷ್ಟನೆ ನೀಡದ ಕಾರಣ 2025ರ ಅಕ್ಟೋಬರ್ 4ರಂದು ಮೂವರನ್ನೂ ಅಮಾನತುಗೊಳಿಸುವಂತೆ ಆದೇಶಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ, “ಸಮೀಕ್ಷಾ ಕಾರ್ಯದಲ್ಲಿ ಇದೇ ತರದ ನಿರ್ಲಕ್ಷ್ಯ ತೋರಿದರೆ ಅಥವಾ ಸಹಕಾರ ನೀಡದಿದ್ದರೆ, ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಲಾಗಿದೆ.