
ಉಡುಪಿ: ಸರಸರನೆ ಬಹುಮಹಡಿ ಕಟ್ಟಡವೇರಿದ ಭಾರತದ ‘ಮಂಕಿಮ್ಯಾನ್’!
ಉಡುಪಿ: ಭಾರತದ ಮಂಕಿಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ಉಡುಪಿಯ ಬ್ರಹ್ಮಗಿರಿಯಲ್ಲಿ ಇರುವ 25 ಅಂತಸ್ತುಗಳ ವಸತಿ ಸಮುಚ್ಚಯವನ್ನು ಹತ್ತುವುದರ ಮೂಲಕ ಮತ್ತೊಮ್ಮೆ ಸಾಧನೆ ಮಾಡಿದ್ದಾರೆ.
ಉಡುಪಿ ಬ್ರಹ್ಮಗಿರಿ ಸಮೀಪದ ವುಡ್ಸ್ ವಿಲ್ಲ ವಸತಿ ಸಮುಚ್ಚಯವನ್ನು ಗುರುವಾರ ಬೆಳಿಗ್ಗೆ 10.17ಕ್ಕೆ ಹತ್ತಲು ಆರಂಭಿಸಿದ ಅವರು 10.44 ಕ್ಕೆ ಕೊನೆಯ ಮಹಡಿಯನ್ನು ತಲುಪಿ ಕನ್ನಡ ಬಾವುಟವನ್ನು ಹಾರಿಸುವುದರ ಮೂಲಕ ಸಂಭ್ರಮಿಸಿದರು.
ತನ್ನ ಚಾಲೆಂಜ್ ಮುಗಿಸಿ ಕಟ್ಟಡದಿಂದ ಕೆಳಗಡೆ ಬಂದ ಜ್ಯೋತಿ ರಾಜ್ ಅವರನ್ನು ಪೊಲೀಸ್ ಇಲಾಖೆಯ ಸಿಬಂದಿಗಳು, ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಹಾಜರಿದ್ದ ನಾಗರಿಕರು ಕರತಾಡನದ ಮೂಲಕ ಅಭಿನಂದಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ಜೋಗದಲ್ಲಿ ಬಿದ್ದು ಬೆನ್ನುಮೂಳೆ ನೋವು ಮಾಡಿಕೊಂಡಿದ್ದ ಕೋತಿರಾಜು ಬಳಿಕ ಒಂದೂವರೆ ವರ್ಷ ವಿಶ್ರಾಂತಿ ಪಡೆದಿದ್ದರು. ಈ ವೇಳೆ ಸುಮಾರು 130 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ಮತ್ತೆ ವ್ಯಾಯಾಮ ಮಾಡಿ ದೇಹದ ತೂಕ ತಗ್ಗಿಸಿ ಕೋತಿ ರಾಜು ತಮ್ಮ ಸಾಹಸ ಕಾರ್ಯವನ್ನು ಮುಂದುವರೆಸಿದ್ದಾರೆ. ಕ್ಲೈಮ್ಮಿಂಗ್ ಫೌಂಡೇಶನ್ ಸ್ಥಾಪಿಸುವ ಉದ್ದೇಶ ಹೊಂದಿರುವ ಕೋತಿರಾಜು, ಇದಕ್ಕಾಗಿ ನಾಡಿನೆಲ್ಲೆಡೆ ತಿರುಗಿ ಸಾಹಸ ಮಾಡುವ ಗುರಿಯನ್ನು ಹೊಂದಿದ್ದಾರೆ. ದೇಶದೆಲ್ಲೆಡೆ ಈ ರೀತಿ ಬೆಟ್ಟ, ಗುಡ್ಡ ಹತ್ತಿ ಕನ್ನಡ ಬಾವುಟ ಹಾರಿಸುತ್ತೇನೆ. ವಿದೇಶದಲ್ಲೂ ಸಾಹಸ ಮಾಡಿ ರಾಷ್ಟ್ರ ಧ್ವಜ ಹಾರಿಸುತ್ತೇನೆ ಎಂದು ಕೋತಿರಾಜು ತನಗಿರುವ ಆಸೆಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಜನರು ನೀಡುವ ಧನ ಸಹಾಯದಿಂದ ಫೌಂಡೇಶನ್ ಸ್ಥಾಪಿಸುತ್ತೇನೆ. ಆ ಫೌಂಡೇಶನ್ ಮೂಲಕ ಆಸಕ್ತಿ ಇರುವ ಯುವಕರಿಗೆ ತರಬೇತಿ ನೀಡಿ ಒಲಿಂಪಿಕ್ಸ್ಗೆ ತಯಾರು ಮಾಡುತ್ತೇನೆ ಎಂದು ಕೋತಿರಾಜು ಹೇಳಿದ್ದಾರೆ.