ಉಡುಪಿ: ಸ್ಥಳದಲ್ಲೇ ಟ್ರಾನ್ಸ್‌ಜೆಂಡರ್ ಕಾರ್ಡ್‌ ನೋಂದಣಿ

Spread the love

ಉಡುಪಿ: ಸ್ಥಳದಲ್ಲೇ ಟ್ರಾನ್ಸ್‌ಜೆಂಡರ್ ಕಾರ್ಡ್‌ ನೋಂದಣಿ

ಉಡುಪಿ: ಸರ್ಕಾರದ ವಿವಿಧ ಯೋಜನೆಗಳಡಿ ಪ್ರಯೋಜನ ಪಡೆಯಲು ಅಗತ್ಯವಾಗಿ ಬೇಕಿರುವ ಟ್ರಾನ್ಸ್‌ಜೆಂಡರ್‌ ಕಾರ್ಡ್‌ಗಳನ್ನು ಪಡೆದುಕೊಳ್ಳಲು ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸ್ಥಳದಲ್ಲಿಯೇ ಪರಿಹಾರ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.


ಮಂಗಳವಾರ ಬ್ರಹ್ಮಗಿರಿಯ ಬಾಲಭವನದಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಮತ್ತು ದಮನಿತ ಮಹಿಳೆಯರ ಸಮುದಾಯ ಸಂಗಮ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಟ್ರಾನ್ಸ್‌ಜೆಂಡರ್ ಕಾರ್ಡ್‌ಗಳು ಸಿಗದ ಬಗ್ಗೆ ಲಿಂಗತ್ವ ಅಲ್ಪಸಂಖ್ಯಾತರು ಜಿಲ್ಲಾಧಿಕಾರಿಗಳ ಬಳಿ ಸಮಸ್ಯೆ ಹೇಳಿಕೊಂಡಾಗ ಸ್ಥಳದಲ್ಲಿಯೇ ಕಾರ್ಡ್‌ ವಿತರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಅದರಂತೆ, ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿಯೇ ವಿಶೇಷ ನೋಂದಣಿ ಶಿಬಿರ ನಡೆಸಲಾಯಿತು. 20 ಮಂದಿ ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಿ ಅರ್ಜಿ ವಿತರಿಸಿ ನೋಂದಣಿ ಮಾಡಿಕೊಳ್ಳಲಾಯಿತು. ಶೀಘ್ರ ಗುರುತಿನ ಚೀಟಿ ವಿತರಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಈ ಮೂಲಕ ಲಿಂಗತ್ವ ಅಲ್ಪ ಸಂಖ್ಯಾತರ ಬಹುಕಾಲದ ಸಮಸ್ಯೆಗೆ ಪರಿಹಾರ ದೊರೆಯಿತು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಸಂವಿಧಾನವು ಪ್ರತಿಯೊಬ್ಬರೂ ಗೌರವಯುತವಾಗಿ ಹಾಗೂ ಸ್ವಾಭಿಮಾನದಿಂದ ಬದುಕುವ ಹಕ್ಕು ನೀಡಿದೆ. ಲಿಂಗತ್ವ ಅಲ್ಪ ಸಂಖ್ಯಾತರೂ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೊಂದಿಗೆ ಬದುಕಲು ಮುಕ್ತ ಅವಕಾಶಗಳು ಇವೆ. ಜಿಲ್ಲಾಡಳಿತದಿಂದಲೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ.

ಲಿಂಗತ್ವ ಅಲ್ಪಸಂಖ್ಯಾತರು ಆರ್ಥಿಕವಾಗಿ ಸ್ವಾವಲಂಬಿಯಾಗಲು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಿರುವ ಅನುದಾನ ಬಿಡುಗಡೆಗೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ಶೀಘ್ರದಲ್ಲಿ ಸೌಲಭ್ಯಗಳು ದೊರೆಯಲಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಲಿಂಗತ್ವ ಅಲ್ಪಸಂಖ್ಯಾತರ ಸೂಕ್ಷ್ಮಗಳನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಮುದಾಯಕ್ಕೆ ಆಧಾರ್ ಕಾರ್ಡ್‌ನಲ್ಲಿ ಆಗಬೇಕಿರುವ ಅಗತ್ಯ ಬದಲಾವಣೆಗಳನ್ನು ಮಾಡಲು ಪ್ರತ್ಯೇಕ ಶಿಬಿರ ಆಯೋಜಿಸಬೇಕು. ಅಗತ್ಯ ತಿದ್ದುಪಡಿ ಮಾಡಿಕೊಡಬೇಕು, ಪಿಂಚಣಿ ಸೌಲಭ್ಯ ಪಡೆಯದವರನ್ನು ಗುರುತಿಸಿ ಪಿಂಚಣಿ ಸೌಲಭ್ಯ ಒದಗಿಸಬೇಕು. ಯಾವುದೇ ಸಂದರ್ಭದಲ್ಲೂ ಅವರ ಗೌಪ್ಯತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲಿಂಗತ್ವ ಅಲ್ಪಸಂಖ್ಯಾತರ ಪ್ರತಿನಿಧಿ ಸಮೀಕ್ಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್‌.ಶರ್ಮಿಳಾ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಉಡುಪಿ ತಹಶೀಲ್ದಾರ್ ರವಿ ಅಂಗಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ರಮೇಶ್ ಕೆ.ಶೆಟ್ಟಿ, ಬನ್ನಂಜೆ ಲಯನ್ಸ್ ಕ್ಲಬ್ ಅಧ್ಯಕ್ಷೆ ವಸಂತಿ ಕಿದಿಯೂರು, ಗಾರ್ಡ್ ಸಂಸ್ಥೆಯ ಸೌಜನ್ಯ ಶೆಟ್ಟಿ. ಆಶ್ರಯ ಸಮುದಾಯ ಸಂಘಟನೆಯ ಅಧ್ಯಕ್ಷ ಸುದರ್ಶನ್, ಆಸರೆ ಸಮುದಾಯ ಸಂಘಟನೆಯ ಅಧ್ಯಕ್ಷ ಸಂಜೀವ ವಂಡ್ಸೆ, ದಮನಿತ ಮಹಿಳೆಯರ ಪ್ರತಿನಿಧಿ ಅಮೃತಾ ಇದ್ದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಗಾರ್ಡ್ ಸಂಸ್ಥೆಯ ಚಂದ್ರಿಕಾ ಸ್ವಾಗತಿಸಿದರು. ರೇಣುಕಾ ವಂದಿಸಿದರು. ನರೇಶ್ ಕಾರ್ಯಕ್ರಮ ನಿರೂಪಿಸಿದರು.


Spread the love