ಉಡುಪಿ : ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

Spread the love

ಉಡುಪಿ : ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಉಡುಪಿ : ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆಸಾಮಿಗಳನ್ನು ಪತ್ತೆ ಹಚ್ಚುವ ಸಲುವಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ಆ ತಂಡಗಳು ಕಳೆದ 15 ದಿನಗಳಿಂದ ಹೊರಜಿಲ್ಲೆ, ಹೊರರಾಜ್ಯಗಳಲ್ಲಿ ಸಂಚರಿಸಿ ಒಟ್ಟು 24ಕ್ಕೂ ಅಧಿಕ ಸಂಖ್ಯೆಯ ಆಸಾಮಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ತಿಳಿಸಿದ್ದಾರೆ.

ಬಂಧಿತರ ಪೈಕಿ ಪೈಕಿ ಭಾರತ – ನೇಪಾಳ ಗಡಿ ಪ್ರದೇಶ – 01, ಮಧ್ಯಪ್ರದೇಶ – 01, ಕೇರಳ – 03, ಹೊರಜಿಲ್ಲೆಗಳಲ್ಲಿ – 04 ಹಾಗೂ ಉಳಿದವರನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿದೆ. ಇವರ ಪೈಕಿ 12 ವರ್ಷಗಳಿಂದ ತಲೆಮರೆಸಿಕೊಂಡವರು 02, 10 ವರ್ಷಗಳಿಂದ ತಲೆಮರೆಸಿಕೊಂಡವರು 02, 7 ವರ್ಷಗಳಿಂದ ತಲೆಮರೆಸಿಕೊಂಡವರು 02, 6 ವರ್ಷಗಳಿಂದ ತಲೆಮರೆಸಿಕೊಂಡವರು 01, 5 ವರ್ಷಗಳಿಂದ ತಲೆಮರೆಸಿಕೊಂಡವರು – 02, 4 ವರ್ಷಗಳಿಂದ ತಲೆಮರೆಸಿಕೊಂಡವರು 02, 3 ವರ್ಷಗಳಿಂದ ತಲೆಮರೆಸಿಕೊಂಡವರು 01, 2 ವರ್ಷಗಳಿಂದ ತಲೆಮರೆಸಿಕೊಂಡವರು 04 ಹಾಗೂ ಉಳಿದ 8 ಜನರು 1 ವರ್ಷದಿಂದ ತಲೆಮರೆಸಿಕೊಂಡವರಾಗಿರುತ್ತಾರೆ. ತಲೆಮರೆಸಿಕೊಂಡವರ ಪೈಕಿ ದರೋಡೆ, ಸರಕಾರಿ ನೌಕರರ ಮೇಲೆ ಹಲ್ಲೆ, ಕಳವು, ಅಪಹರಣ, ಬಲದ್ಘ್ರಹಣ, ಅತ್ಯಾಚಾರ, ಮಾರಣಾಂತಿಕ ರಸ್ತೆ ಅಪಘಾತ ಹಾಗೂ ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಒಳಗೊಂಡ ಆಸಾಮಿಗಳಾಗಿರುತ್ತಾರೆ.

ಪ್ರಕಾಶ್ @ ಪಕೀರಪ್ಪ: ಹೆಬ್ರಿ ಠಾಣೆಯಲ್ಲಿ ವರದಿಯಾದ ದರೋಡೆ ಪ್ರಕರಣದಲ್ಲಿ ಶಿಕ್ಷೆ ಹೊಂದಿ ಕಳೆದ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿ ಪ್ರಕಾಶ ಅಲಿಯಾಸ್ ಪಕೀರಪ್ಪ ಎಂಬಾತನನ್ನು ಠಾಣಾ ಸಿಬ್ಬಂದಿಯವರಾದ ಸುರೇಶ್ ಕುಮಾರ್, ರಾಜ್ಕುಮಾರ್ ಹಾಗೂ ಭರತ್ರವರು ಕೊಪ್ಪಳ ಜಿಲ್ಲೆಯ ಮಾದನೂರಿನಲ್ಲಿ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಒಲಿವರ್ ಗ್ಲಾಡನ್ ವಿಲ್ಸನ್: ಕಾಪು ಠಾಣೆಯ ಸರಹದ್ದಿನಲ್ಲಿ ವಾಸಿಸುತ್ತಿದ್ದು, ಚೆಕ್ ಅಮಾನ್ಯ ಪ್ರಕರಣದಲ್ಲಿ ಶಿಕ್ಷೆ ಹೊಂದಿ ಕಳೆದ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿ ಒಲಿವರ್ ಗ್ಲಾಡನ್ ವಿಲ್ಸನ್ ಎಂಬಾತನನ್ನು ಠಾಣಾ ಸಿಬ್ಬಂದಿ ಸುಧಾಕರರವರು ಉದ್ಯಾವರ ಬಾಲಾಜಿ ಅಪಾರ್ಟ್ಮೆಂಟ್ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ರಾಜೀವ ಶೆಟ್ಟಿ: ಬ್ರಹ್ಮಾವರ ಠಾಣೆಯಲ್ಲಿ ವರದಿಯಾದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ  ಕಳೆದ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ರಾಜೀವ ಶೆಟ್ಟಿ ಎಂಬಾತನನ್ನು ಠಾಣಾ ಸಿಬ್ಬಂದಿಯವರಾದ ಮೊಹಮ್ಮದ್ ಅಜ್ಮಲ್ ಮತ್ತು ಸಂತೋಷ್ ರಾಠೋಡ್ರವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಬೆಳ್ಳೂರು ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಗುರುಪ್ರಸಾದ್: ಶಿರ್ವಾ ಠಾಣೆಯಲ್ಲಿ ವರದಿಯಾದ ಕನ್ನ ಕಳವು ಪ್ರಕರಣದಲ್ಲಿ ಭಾಗಿಯಾಗಿ ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಗುರುಪ್ರಸಾದ್ ಎಂಬಾತನನ್ನು ಠಾಣಾ ಎ.ಎಸ್.ಐ. ವಿವೇಕಾನಂದ ಹಾಗೂ ಸಿಬ್ಬಂದಿಯವರಾದ ಭಾಸ್ಕರರವರು ಮೂಡಬಿದ್ರಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾಯಾಲಯವು ಆತನ ಬಂಧನಕ್ಕಾಗಿ ಪ್ರೊಕ್ಷಮೇಷನ್ ಹೊರಡಿಸಿತ್ತು.

ಉಮರ್: ಶಿರ್ವಾ ಠಾಣೆಯಲ್ಲಿ ವರದಿಯಾದ ಅಪಹರಣ ಮತ್ತು ಬಲದ್ಘ್ರಹಣ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಉಮರ್ ಎಂಬಾತನನ್ನು ಠಾಣಾ ಸಿಬ್ಬಂದಿಯವರಾದ ಭಾಸ್ಕರ ಮತ್ತು ರಾಮರವರು ಚಂದ್ರನಗರ, ಕಳತ್ತೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾಯಾಲಯವು ಆತನ ಬಂಧನಕ್ಕಾಗಿ ಎಲ್.ಪಿ.ಸಿ. ಹೊರಡಿಸಿತ್ತು.

ಸುದರ್ಶನ್: ಶಿರ್ವಾ ಠಾಣೆಯಲ್ಲಿ ವರದಿಯಾದ ಕನ್ನ ಕಳವು ಪ್ರಕರಣದಲ್ಲಿ ಭಾಗಿಯಾಗಿ ಕಳೆದ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸುದರ್ಶನ್ ಎಂಬಾತನನ್ನು ಠಾಣಾ ಸಿಬ್ಬಂದಿಯವರಾದ ಭಾಸ್ಕರ ಮತ್ತು ರಾಮರವರು ಬೆಳ್ಳೆ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಜೀತೇಂದ್ರ ಶಾರ್ಕಿ: ಮಣಿಪಾಲ ಠಾಣೆಯಲ್ಲಿ ವರದಿಯಾದ ಪೋಕ್ಸೋ ರೇಪ್ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಜೀತೇಂದ್ರ ಶಾರ್ಕಿ, ನೇಪಾಳ ಎಂಬಾತನನ್ನು ಭಾರತ ನೇಪಾಳ ಗಡಿಭಾಗದ ಉತ್ತರಾಖಂಡದ ಗಡಿಕೋಟ್ ಎಂಬಲ್ಲಿ ಠಾಣಾ ಪಿ.ಎಸ್.ಐ.ರವರಾದ ಅಬ್ದುಲ್ ಖಾದರ್, ನಿಧಿ ಬಿ.ಎನ್. ಹಾಗೂ ಸಿಬ್ಬಂದಿಯವರಾದ ಥೋಮ್ಸನ್ರವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಾಬು: ಬೈಂದೂರು ಠಾಣೆಯಲ್ಲಿ ವರದಿಯಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಾಬು ಎಂಬಾತನನ್ನು ಕೇರಳದ ಪಾಲಕ್ಕಾಡ್ ಎಂಬಲ್ಲಿ ಠಾಣಾ ಎ.ಎಸ್.ಐ. ಹರೀಶ್ ಎಸ್. ಮತ್ತು ಸಿಬ್ಬಂದಿಯವರಾದ ಪ್ರಿನ್ಸ್ ಕೆ.ಜೆ.ರವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಿರುತ್ತದೆ.

ಕೃಷ್ಣನ್ ಕುಟ್ಟಿ: ಬೈಂದೂರು ಠಾಣೆಯಲ್ಲಿ ವರದಿಯಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣನ್ ಕುಟ್ಟಿ ಎಂಬಾತನನ್ನು ಕೇರಳದ ಕೊಟ್ಟಾರಕೆರ ಎಂಬಲ್ಲಿ ಠಾಣಾ ಎ.ಎಸ್.ಐ. ಹರೀಶ್ ಎಸ್. ಮತ್ತು ಸಿಬ್ಬಂದಿಯವರಾದ ಪ್ರಿನ್ಸ್ ಕೆ.ಜೆ.ರವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆತನನ್ನು ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಿರುತ್ತದೆ.

ಸಹದೇವಾ: ಬೈಂದೂರು ಠಾಣೆಯಲ್ಲಿ ವರದಿಯಾದ ಕಳವು ಪ್ರಕರಣದಲ್ಲಿ ಭಾಗಿಯಾಗಿ ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸಹದೇವ ಎಂಬಾತನನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ನ್ಯಾಸರ್ಗಿ ಎಂಬಲ್ಲಿ ಠಾಣಾ ಸಿಬ್ಬಂದಿಯವರಾದ ಸುರೇಶ್ ಎಂ. ಗದಗರವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಬಂಧನಕ್ಕಾಗಿ ಪ್ರೊಕ್ಷಮೇಷನ್ ಹೊರಡಿಸಿತ್ತು.

ಸುನಿಲ್ ಕುಮಾರ್: ಬೈಂದೂರು ಠಾಣೆಯಲ್ಲಿ ವರದಿಯಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸುನಿಲ್ ಕುಮಾರ್, ರಾಜಸ್ಥಾನ ಎಂಬಾತನನ್ನು ಕುಂದಾಪುರದ ಮಂಗಳಪಾಂಡೆ ರಸ್ತೆ ಎಂಬಲ್ಲಿ ಠಾಣಾ ಸಿಬ್ಬಂದಿಯವರಾದ ಚಂದ್ರ ಪಿ. ಮತ್ತು ಸುರೇಶ್ ಎಂ. ಗದಗ ಎಂಬವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆತನನ್ನು ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಿರುತ್ತದೆ.

ಶೇಷಮನಿ ನಾಮದೇವ್: ಕುಂದಾಪುರ ಸಂಚಾರ ಠಾಣೆಯಲ್ಲಿ ವರದಿಯಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಧ್ಯಪ್ರದೇಶದ ವಾಸಿ ಶೇಷಮನಿ ನಾಮದೇವ್ ಮಧ್ಯಪ್ರದೇಶದ ದಿಯೋತಲಾಬ್ ಎಂಬಲ್ಲಿ ಠಾಣಾ ಎ.ಎಸ್.ಐ. ಸುರೇಶ ಮತ್ತು ಸಿಬ್ಬಂದಿಯವರಾದ ಪ್ರಭಾಕರ ಬಿಲ್ಲವ ಮತ್ತು ರಮೇಶ್ ಉಪ್ಪಾರ ಎಂಬವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆತನಿಗೆ ದಂಡ ವಿಧಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿರುತ್ತದೆ.

ಕೊಲ್ಲೂರು ಠಾಣೆಯಲ್ಲಿ ವರದಿಯಾದ ಪ್ರಕರಣವೊಂದರಲ್ಲಿ ಭಾಗಿಯಾಗಿ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತೆ ನಿಶಿ ಎಂಬಾಕೆಯನ್ನು ಠಾಣಾ ಸಿಬ್ಬಂದಿಯವರಾದ ವೆಂಕಟೇಶ್ರವರು ಕೇರಳ ರಾಜ್ಯದ ತಳಿಪರಾಂಬ ಎಂಬಲ್ಲಿ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಕರಣವನ್ನು ಮುಕ್ತಾಯಗೊಳಿಸಿರುತ್ತಾರೆ.

ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿ ಸಿಬ್ಬಂದಿಯವರನ್ನು ಪೊಲೀಸ್ ಅಧೀಕ್ಷಕರಾದ ಶ್ರೀ ಅಕ್ಷಯ್ ಎಂ. ಹೆಚ್., ಐ.ಪಿ.ಎಸ್.ರವರು ಶ್ಲಾಘಿಸಿರುತ್ತಾರೆ.


Spread the love

Leave a Reply

Please enter your comment!
Please enter your name here