ಉಡುಪಿ: 13 ನೇ ತಂಡದ ಪೊಲೀಸ್‌ ಕಾನ್‌ ಸ್ಟೇಬಲ್‌ ಗಳ ನಿರ್ಗಮನ ಪಥ ಸಂಚಲನ

Spread the love

ಉಡುಪಿ: 13 ನೇ ತಂಡದ ಪೊಲೀಸ್‌ ಕಾನ್‌ ಸ್ಟೇಬಲ್‌ ಗಳ ನಿರ್ಗಮನ ಪಥ ಸಂಚಲನ

ಉಡುಪಿ: ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯ 13 ನೇ ತಂಡದ ಪೊಲೀಸ್‌ ಕಾನ್‌ ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ಜರುಗಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜೆ ಎನ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿ 13 ನೇ ತಂಡದ  ಪೊಲೀಸ್‌ ಕಾನ್‌ ಸ್ಟೇಬಲ್‌ ಗಳ ನಿರ್ಗಮನ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿದರು.

ಕಳೆದ ಎಂಟು ತಿಂಗಳಿಂದ 100 ಶಿಬಿರಾರ್ಥಿಗಳಿಗೆ ನಾನಾ ಇಲಾಖೆಗಳಿಂದ ಅತಿಥಿ ಉಪನ್ಯಾಸಕರು ನಾನಾ ವಿಷಯಗಳ ಬಗ್ಗೆ ಮನವರಿಕೆ, ಹೊರಾಂಗಣದ ತರಬೇತಿಯನ್ನು ನೀಡಿದ ಕುರಿತು ಹೆಚ್ಚುವರಿ ಎಸ್ಪಿ ಎಸ್‌ ಟಿ ಸಿದ್ದಲಿಂಗಪ್ಪ ವರದಿ ಮಂಡಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಪ್ರಶಿಕ್ಷಣಾರ್ಥಿ ಪೊಲೀಸ್‌ ಕಾನ್‌ ಸ್ಟೇಬಲ್‌ ಗಳಿಗೆ ಬಹುಮಾನ ವಿತರಿಸಲಾಯಿತು. ನಾನಾ ಉಪನ್ಯಾಸಕರಿಗೂ ಬಹುಮಾನ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 100 ಜನರ ನಿರ್ಗಮಿತ ಪಥ ಸಂಚಲನ ಆಕರ್ಷಕವಾಗಿತ್ತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌ ವಿಷ್ಣುವರ್ಧನ್‌ ಅವರು ಸ್ವಾಗತಿಸಿ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್‌ ವಂದಿಸಿದರು. ಕರಾವಳಿ ಕಾವಲು ಪಡೆಯ ಮನಮೋಹನ್‌ ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ವೃತ್ತಗಳ ಹಿರಿಯ ಪೊಲೀಸ್‌ ಅಧಿಕಾರಿಗಳು, ಪಿಎಸ್‌ಐ, ಸಿಬ್ಬಂದಿ, ತರಬೇತಿ ಪಡೆದ ಪೊಲೀಸರ ಪಾಲಕರು ಪಾಲ್ಗೊಂಡಿದ್ದರು.


Spread the love