ಉದಯಪುರ ಹತ್ಯೆ ಇಸ್ಲಾಂ ಮತ್ತು ದೇಶದ ಕಾನೂನಿಗೆ ವಿರುದ್ಧವಾಗಿದೆ: ಯಾಸೀನ್ ಹೆಮ್ಮಾಡಿ

Spread the love

ಉದಯಪುರ ಹತ್ಯೆ ಇಸ್ಲಾಂ ಮತ್ತು ದೇಶದ ಕಾನೂನಿಗೆ ವಿರುದ್ಧವಾಗಿದೆ: ಯಾಸೀನ್ ಹೆಮ್ಮಾಡಿ

ಕುಂದಾಪುರ: ಪ್ರವಾದಿ ಮೊಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಕತ್ತು ಸೀಳಿ ಹತ್ಯೆ ಮಾಡಿರುವುದು ಖಂಡನೀಯ. ಇದು ಇಸ್ಲಾಂ ಮತ್ತು ದೇಶದ ಕಾನೂನಿಗೆ ವಿರುದ್ಧವಾಗಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಯೋಜಕ ಸಯ್ಯದ್ ಯಾಸೀನ್ ಹೆಮ್ಮಾಡಿ ಹೇಳಿಕೆ ನೀಡಿದ್ದಾರೆ.

ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿರುವುದನ್ನು ಪಕ್ಷಾತೀತವಾಗಿ ಖಂಡಿಸಲೇಬೇಕು. ಪಾತಕಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸದರೆ‌ ಮಾತ್ರ ಮತ್ತೊಮ್ಮೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ. ರಕ್ಕಸರಷ್ಟೇ ಇಂಥ ಹೇಯ ಕೃತ್ಯ ಎಸಗಲು ಸಾಧ್ಯ. ಕೊಲೆ, ಕೋಮುವಾದ, ಅಸಹಿಷ್ಣುತೆ, ದ್ವೇಷದಿಂದ ಧರ್ಮಗಳು ಉಳಿಯುವುದಿಲ್ಲ. ಮಾನವೀಯತೆ ಸತ್ತರಷ್ಟೇ ಕೋಮುವಾದ ವಿಜೃಂಭಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಕೃತ್ಯವನ್ನು ಯಾರೇ ಮಾಡಿದರೂ ಅದನ್ನು ಸಮರ್ಥಿಸಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಇದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಎಲ್ಲಾ ನಾಗರಿಕರು ತಾಳ್ಮೆಯಿಂದ ವರ್ತಿಸಿ ದೇಶದಲ್ಲಿ ಶಾಂತಿಯನ್ನು ಕಾಪಾಡಬೇಕು ಎಂದು ಮನವಿ ಮಾಡಿಕೊಂಡ ಅವರು, ಇಂದು ಕನ್ಹಯ್ಯ ಅವರಿಗಾಗಿ ಇಡೀ ಭಾರತ ಕಣ್ಣೀರಿಡುತ್ತಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ. ಕನ್ಹಯ್ಯ ಅವರ ಸಾವು ಕೊಂದು ವಿಜೃಂಭಿಸುವ ಕಿರಾರತಕ ಮನಃಸ್ಥಿತಿಯನ್ನು ಬದಲಿಸಲಿ ಎಂದಿದ್ದಾರೆ


Spread the love