ಉದಯ್ ಗಾಣಿಗ ಹತ್ಯಾ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ – ಸಂಕಪ್ಪ ಎ

Spread the love

ಉದಯ್ ಗಾಣಿಗ ಹತ್ಯಾ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ – ಸಂಕಪ್ಪ ಎ

ಉಡುಪಿ: ಬೈಂದೂರು ಯಡಮೊಗೆ ಗಾಣಿಗ ಸಮಾಜದ ಉದಯ ಎನ್ನುವ ಸಾಮಾಜಿಕ ಕಾರ್ಯಕರ್ತನನ್ನು ಹೀನಾಯವಾಗಿ ಹತ್ಯೆ ಮಾಡಿರುವುದು ಜಿಲ್ಲೆಯ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಈ ಹೀನ ಕೃತ್ಯದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ ಸಹಿತ ಪ್ರಮುಖ ನಾಯಕರ ನೇರ ಕೈವಾಡ ಇರುವುದು ತಿಳಿದು ಬಂದಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ ಸಂಕಪ್ಪ ಎ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಕೋಟದಲ್ಲಿ ನಡೆದ ಅವಳಿ ಕೊಲೆ ಪ್ರಕರಣ, ಬ್ರಹ್ಮಾವರದ ಪ್ರವೀಣ್ ಪೂಜಾರಿ ಕೊಲೆ ಪ್ರಕರಣಗಳಲ್ಲಿಯೂ ಬಿಜೆಪಿ ನಾಯಕರು ನೇರವಾಗಿ ಭಾಗಿಯಾಗಿರುವುದು, ಮಾತ್ರವಲ್ಲದೆ ಹಿಂದುಳಿದ ಸಮಾಜದ ಯುವಕರನ್ನೇ ಕೊಲೆ ಮಾಡಿರುವುದು ಖಂಡನೀಯ. ಇಂತಹ ಪ್ರಕರಣಗಳು ಮರು ಕಳಿಸದಂತೆ ಬಿಜೆಪಿ ನಾಯಕರು ಮಾತ್ರವಲ್ಲದೆ ಪೊಲೀಸ್ ಇಲಾಕೆ ಎಚ್ಚರಿಕೆ ವಹಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಪಕ್ಷಾತೀತವಾಗಿ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಉದಯ ಗಾಣಿಗ ಕೊಲೆ ಕೃತ್ಯದಲ್ಲಿ ಭಾಗಿಯಾದ ಎಲ್ಲರ ಮೇಲೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಕೊಲೆ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸಲಾರವು. ಮಾತ್ರವಲ್ಲದೆ ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳಿಗೆ ಶಿಕ್ಷೆಯಾದರೆ ಮಾತ್ರ ಉದಯ ಗಾಣಿಗರ ಪತ್ನಿ ಮತ್ತು ಮಕ್ಕಳಿಗೆ ನ್ಯಾಯ ಸಿಕ್ಕಂತಾಗುತ್ತದೆ.

ಕೊಲೆ ನಡೆದ ಕೆಲವೇ ಗಂಟೆಗಳ ಒಳಗೆ ಜಿಲ್ಲೆಯ ಪೊಲೀಸ್ ಇಲಾಖೆ ತಪ್ಪಿತಸ್ಥ ಆರೋಪಿಗಳನ್ನು ವಶಕ್ಕೆ ಪಡೆದಿರುವುದು ಶಾಘ್ಲನೀಯ. ಇದಕ್ಕಾಗಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕ ಗಳ ಪರವಾಗಿ ಪೊಲೀಸ್ ಇಲಾಖೆಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ. ಈಗಾಗಲೇ ಉಡುಪಿ ಜಿಲ್ಲಾ ಕಾಂಗ್ರೆಸ್ ನ ಹಿರಿಯ ನಾಯಕರುಗಳು ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದು, ಉನ್ನತ ತನಿಖೆಗೆ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು ಆರೋಪಿಗಳಿಗೆ ರಕ್ಷಣೆ ನೀಡದೆ, ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕು ಮತ್ತು ಉದಯ ಗಾಣಿಗರ ಪತ್ನಿ ಮತ್ತು ಮಕ್ಕಳಿಗೆ ಸರಕಾರ ದಿಂದ ಉದ್ಯೋಗ ಹಾಗೂ ಗರಿಷ್ಠ ಪರಿಹಾರ ನೀಡಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಸಂಕಪ್ಪ ಎ ಮನವಿ ಮಾಡಿದ್ದಾರೆ.


Spread the love