ಉದಯ ಗಾಣಿಗ ಕೊಲೆ ಪ್ರಕರಣ: ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ ಎ.ಪಿ.ಸಿ.ಆರ್

Spread the love

ಉದಯ ಗಾಣಿಗ ಕೊಲೆ ಪ್ರಕರಣ: ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ ಎ.ಪಿ.ಸಿ.ಆರ್

ಉಡುಪಿ: ಕುಂದಾಪುರ ತಾಲೂಕಿನ ಎಡಮೊಗೆಯಲ್ಲಿ ಸಾಮಾಜಿಕ ಕಾರ್ಯಕರ್ತ ಉದಯ ಗಾಣಿಗ ಕೊಲೆಗೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕು ಆಯೋಗದಲ್ಲಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಉಡುಪಿ ಇದರ ವತಿಯಿಂದ ದೂರು ದಾಖಲಿಸಲಾಗಿದೆ ಎಂದು ಹುಸೇನ್ ಕೋಡಿಬೆಂಗ್ರೆ ತಿಳಿಸಿದ್ದಾರೆ.

ದೂರಿನಲ್ಲಿ ಉದಯ ಗಾಣಿಗ ಕೊಲೆ ಪ್ರಕರಣದ ಆರೋಪಿಗಳು ಸ್ಥಳೀಯ ರಾಜಕೀಯ ಮುಖಂಡರುಗಳಾಗಿದ್ದು, ತನಿಖೆಯಲ್ಲಿ ಹಸ್ತಕ್ಷೇಪ ನಡೆಸಿ ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆಯಿರುವುದರಿಂದ ಪ್ರಕರಣವನ್ನು ಸಿಓಡಿ ತನಿಖೆಗೆ ನೀಡಬೇಕೆಂದು ಒತ್ತಾಯಿಸಲಾಗಿದೆ.

ಇದರೊಂದಿಗೆ ಉದಯ ಗಾಣಿಗ ಅವರು ಕುಟುಂಬದ ಏಕೈಕ ದುಡಿಯುವ ಕೈಯಾಗಿದ್ದು ಅವರ ಕೊಲೆಯಿಂದಾಗಿ ಪತ್ನಿ ಮತ್ತು ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಈ ಸಂಬಂಧ ಐವತ್ತು ಲಕ್ಷ ರೂ.ಪರಿಹಾರ ನೀಡಲು ಸರಕಾರಕ್ಕೆ ಶಿಫಾರಸು ಮಾಡುವಂತೆ ವಿನಂತಿಸಲಾಗಿದೆ. ಈ ಸಂಬಂಧ ಮಾನವ ಹಕ್ಕು ಆಯೋಗದಲ್ಲಿ ದೂರು ದಾಖಲಾಗಿದೆ ಎಂದು ಹುಸೇನ್ ಕೋಡಿಬೆಂಗ್ರೆ ತಿಳಿಸಿದ್ದಾರೆ.

ಎಪಿಸಿಆರ್ ಸಲ್ಲಿಸಿದ ದೂರಿನ ಸಂಕ್ಷಿಪ್ತ ವಿವರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಮೊಗೆ ಗ್ರಾಪಂ ವ್ಯಾಪ್ತಿಯ ಸಾಮಾಜಿಕ ಕಾರ್ಯಕರ್ತ, ಸಮಾಜ ಸೇವಕ ಮೃತ ಉದಯ ಗಾಣಿಗರನ್ನು ಸಂಘಪರಿವಾರದ ಸ್ಥಳೀಯ ಮುಖಂಡರಾದ ಮತ್ತು ಹಾಲಿ ಗ್ರಾಪಂ ಅಧ್ಯಕ್ಷ ಪ್ರಾಣೇಶ ಯಡಮೊಗೆ ಒಳಗೊಂಡು ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಕಮಲಶಿಲೆಯ ಬಾಲಚಂದ್ರ ಭಟ್, ರಾಜೇಶ್ ಭಟ್, ಅಜ್ಜಿಕಾಣು ಯಡಮೊಗೆ ಮತ್ತು ಇತರರು ಉದ್ದೇಶ ಪೂರ್ವಕವಾಗಿ ಉದಯ ಗಾಣಿಗರನ್ನು ರಸ್ತೆ ಬಳಿ ಕರೆಯಿಸಿ ಹಲ್ಲೆ ನಡೆಸಿದ್ದರು.

ದೇವದಾಸ್ ಶೆಟ್ಟಿ ಎಂಬವರ ಮಾಲಕತ್ವದ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಉದಯ ಗಾಣಿಗರನ್ನು ಕೊಲೆ ಮಾಡುವ ಉದ್ದೇಶದಿಂದ ಮೈ ಮೇಲೆ ಕಾರು ಹತ್ತಿಸಿ, ಮೃತಪಟ್ಟಿಲ್ಲವೆಂದು ತಿಳಿದ ನಂತರ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ, ಮಾರಕಾಯುಧಗಳಿಂದ ಹೊಡೆದು, ಬಡಿದು ಅಮಾನುಷವಾಗಿ ಹತ್ಯೆಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಯಡಮೊಗೆಯ ಉದಯ ಗಾಣಿಗರು ಕಳೆದ ಹಲವು ವರ್ಷಗಳಿಂದ ಸಮಾಜಕ್ಕೆ ತನ್ನಿಂದಾದ ಸೇವೆ ಮಾಡುತ್ತ ಬಂದಿದ್ದಾರೆ. ಸರಕಾರದ ಜನೋಪ ಯೋಗಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಯದಂತೆ ತನ್ನ ಧ್ವನಿಯನ್ನು ನಿರಂತರವಾಗಿ ಎತ್ತಿ ಜನಪರ ಎನಿಸಿಕೊಂಡಿದ್ದರು. ಇದರಿಂದ ಭ್ರಷ್ಟಾಚಾರದ ಕೆಲವು ಚಟುವಟಿಕೆಗಳಿಗೆ ತಡೆಗೋಡೆಯಂತಿದ್ದರು. ರೈತರರಿಗೆ ಅನ್ಯಾಯವಾದಾಗಲೂ ಅವರ ಪರವಾಗಿ ಮಾತನಾಡುತ್ತಿದ್ದರು. ಈ ಹಿನ್ನೆಲೆ ಯಲ್ಲಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಸರ್ವಾಧಿಕಾರಿಯಂತೆ ವರ್ತಿಸಿ ಜನರನ್ನು ಸತಾಯಿಸುತಿದ್ದನ್ನು ಪ್ರಶ್ನಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅವರು ದುಷ್ಕೃತ್ಯಗಳನ್ನು ಪ್ರಶ್ನಿಸಿದ್ದಾಕ್ಕಾಗಿ ಜೂನ್ 5ರ ರಾತ್ರಿ 8 ಗಂಟೆ ಸುಮಾರಿಗೆ ಉದಯ ಗಾಣಿಗರನ್ನು ಅವರ ಮನೆಯ ಬಳಿಯಿರುವ ರಸ್ತೆಯ ಹತ್ತಿರ ಫೋನ್ ಕರೆ ಮಾಡಿ ಕರೆದು ಅಮಾನುಷವಾಗಿ ನಡುಬೀದಿಯಲ್ಲಿ ಬರ್ಬರವಾಗಿ ಕೊಲೆಗೈದಿದ್ದಾರೆ.

ಮನೆಯ ಏಕೈಕ ದುಡಿಯುವ ಕೈಯಾಗಿದ್ದ ಉದಯ ಗಾಣಿಗರನ್ನು ಕಳೆದು ಕೊಂಡ ಅವರ ಪತ್ನಿ, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಈ ದುಷ್ಕೃತ್ಯವು ಮನುಷ್ಯ ಸಮಾಜವು ತಲೆ ತಗ್ಗಿಸುವಂತಹದ್ದಾಗಿದೆ. ಈ ಪ್ರಕರಣದ ಬಗ್ಗೆ ನಿಕ್ಷಪಕ್ಷಪಾತವಾಗಿ ತನಿಖೆ ನಡೆಸಿ ದುಷ್ಕರ್ಮಿಗಳಿಗೆ ಕಠಿಣ ಕಾನೂನಿನ ಮುಖಾಂತರ ಶಿಕ್ಷಿಸಿ, ಮಾನವ ಹಕ್ಕು ಹೋರಾಟಗಾರರ ಹಕ್ಕಿನ ಧಮನವನ್ನು ತಡೆಯಬೇಕಾಗಿದೆ. ಈ ಪ್ರಕರಣದ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವುದರಿಂದ ಈ ಪ್ರಕರಣವನ್ನು ಸಿಒಡಿಗೆ ಒಪ್ಪಿಸಿ ತನಿಖೆ ನಡೆಸಬೇಕು. ಮೃತರ ಕುಟುಂಬ ಸದಸ್ಯರಿಗೆ ಆದಾಯ ಮೂಲ ಇಲ್ಲದಿರುವುದರಿಂದ ತಕ್ಷಣ 50 ಲಕ್ಷ ರೂ. ಪರಿಹಾರ ಒದಗಿಸಲು ಮಾನವ ಹಕ್ಕು ಆಯೋಗ ಶಿಫಾರಸು ಮಾಡಬೇಕು ಎಂದು ವಿನಂತಿಸಲಾಗಿದೆ.


Spread the love