
ಉದ್ಯಾವರ: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ – ವ್ಯಕ್ತಿಯ ಕೊಲೆ
ಕಾಪು: ಮದ್ಯದ ನಶೆಯಲ್ಲಿ ವ್ಯಕ್ತಿಗಳಿಬ್ಬರ ನಡುವೆ ಉಂಟಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಉದ್ಯಾವರ ಸಮೀಪದ ಪಿತ್ರೋಡಿಯಲ್ಲಿ ಗುರುವಾರ ರಾತ್ರಿ ನಡೆದಿದೆ. ಈ ಸಂಬಂಧ ಕೊಲೆ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ
ಮೃತರನ್ನು ಪಿತ್ರೋಡಿ ನಿವಾಸಿ ದಯಾನಂದ (40) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ವ್ಯಕ್ತಿಯನ್ನು ಭರತ್ ಎಂದು ಗುರುತಿಸಲಾಗಿದ್ದು ಪೊಲೀಸರ ಅತಿಥಿಯಾಗಿದ್ದಾನೆ.
ಗುರುವಾರ ರಾತ್ರಿ ಉದ್ಯಾವರ ಪಿತ್ರೋಡಿ ಹಳೆ ಸಿಂಡಿಕೇಟ್ ಬ್ಯಾಂಕ್ ಬಳಿಯ ಬಾರ್ ಒಂದರಲ್ಲಿ ಕುಡಿದ ನಶೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದ್ದು ಬಾರ್ ನಿಂದ ಹೊರಗಡೆ ಬಂದ ದಯಾನಂದ ಮತ್ತು ಭರತ್ ಪರಸ್ಪರ ಜಗಳ ಮಾಡಿಕೊಂಡಿದ್ದು ಈ ವೇಳೆ ಭರತ್ ತನ್ನ ಕೈ ಬೆರಳಿನಲ್ಲಿ ಇದ್ದ ಕಬ್ಬಿಣದ ಪಂಚ್ ನಿಂದ ದಯಾನಂದ ಮುಖ ಹಾಗೂ ಕೆನ್ನೆಯ ಭಾಗಕ್ಕೆ ಬಲವಾಗಿ ಜಜ್ಜಿ ಬಳಿಕ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ ದಯಾನಂದನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾನೆ.
ಹಲ್ಲೆ ನಡೆಸಿದ ಭರತ್ ಘಟನೆಯ ನಂತರ ಸ್ಥಳದಿಂದ ನಾಪತ್ತೆಯಾಗಿದ್ದು ಸ್ಥಳೀಯರ ಸಹಕಾರದಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ,
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.