ಉಳಾಯಿಬೆಟ್ಟು ಬಾಲಕಿಯ ಕೊಲೆ ಪ್ರಕರಣ – ನಾಲ್ವರ ಬಂಧನ

Spread the love

ಉಳಾಯಿಬೆಟ್ಟು ಬಾಲಕಿಯ ಕೊಲೆ ಪ್ರಕರಣ – ನಾಲ್ವರ ಬಂಧನ

ಮಂಗಳೂರು: ಉಳಾಯಿಬೆಟ್ಟು ಸಮೀಪದ ಪರಾರಿ ಎಂಬಲ್ಲಿನ ಟೈಲ್ಸ್ ಫ್ಯಾಕ್ಟರಿಯ ಆವರಣದಲ್ಲಿ ರವಿವಾರ ನಡೆದ ಅಲ್ಲಿನ ಕೂಲಿ ಕಾರ್ಮಿಕ ದಂಪತಿಯ ಪುತ್ರಿ 8 ವರ್ಷದ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆಗೈದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಇವರೆಲ್ಲ ಸ್ನೇಹಿತರಾಗಿದ್ದಾರೆ. ಈ ಪೈಕಿ ಮೂವರು ಮಧ್ಯ ಪ್ರದೇಶ ರಾಜ್ಯದ ಪನ್ನಾ ಜಿಲ್ಲೆಯ ನಿವಾಸಿಗಳಾದರೆ, ಓರ್ವ ಜಾರ್ಖಂಡ್ ರಾಜ್ಯದ ರಾಂಚಿ ನಿವಾಸಿಯಾಗಿರುತ್ತಾನೆ.

ಆರೋಪಿಗಳಲ್ಲಿ ಇಬ್ಬರಿಗೆ 22 ವರ್ಷ, ಓರ್ವನಿಗೆ 21 ಹಾಗೂ ಇನ್ನೋರ್ವ 33 ವರ್ಷ ಎಂದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಆರೋಪಿಗಳು ನ.21ರಂದು ಮಧ್ಯಾಹ್ನ ಫ್ಯಾಕ್ಟರಿಯ ಕಂಪೌಂಡ್ ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಬಲವಂತದಿಂದ ಎತ್ತಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಕತ್ತು ಹಿಸುಕಿ ಕೊಲೆಗೈದಿದ್ದಾರೆ ಎಂದು ಅವರು ಆರೋಪಿಗಳ ದುಷ್ಕೃತ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಬಡ ಕುಟುಂಬದ ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ಆರೋಪಿಗಳು ಭಾನುವಾರ (ನ.21) ಮಧ್ಯಾಹ್ನ‌ ಆಟವಾಡುತ್ತಿದ್ದ ಬಾಲಕಿಯನ್ನು‌ ಅದೇ ಕಾರ್ಖಾನೆಯ ಆವರಣದಲ್ಲಿದ್ದ ರೂಂಗೆ ಕರೆದೊಯ್ದಿದ್ದಾರೆ. ನಂತರ ಬಾಲಕಿಯ ಮೇಲೆ ಮೂವರು ಅತ್ಯಾಚಾರ ನಡೆಸಿದ್ದಾರೆ.

ಇದರಿಂದ ಬಾಲಕಿಗೆ ಆಘಾತ ಆಗಿದ್ದು, ತೀವ್ರ ರಕ್ತಸ್ರಾವವಾಗಿದೆ.‌ ಬಾಲಕಿ‌ ಕಿರಚಾಡಲು ಆರಂಭಿಸಿದ್ದು, ಒಬ್ಬ ಆರೋಪಿ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಕೃತ್ಯದ ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ನೀರು ಹರಿಯುವ ಚರಂಡಿಗೆ ಬಾಲಕಿಯ ಶವವನ್ನು ಎಸೆದಿದ್ದಾರೆ.

ಸಂಜೆ ನಾಲ್ಕು ಗಂಟೆಗೆ ಬಾಲಕಿ‌ ಕಾಣಿಸದೇ ಇರುವುದರಿಂದ ಪಾಲಕರು ಹುಡುಕಾಟ ಆರಂಭಿಸಿದ್ದರು. ಟೈಲ್ಸ್ ಫ್ಯಾಕ್ಟರಿಯ ಸ್ವಲ್ಪ ದೂರದಲ್ಲಿರುವ ನೀರು ಹರಿಯುವ ಚರಂಡಿಯಲ್ಲಿ ಸಂಜೆ 6 ಗಂಟೆಗೆ ಬಾಲಕಿಯ ಶವ ಪತ್ತೆಯಾಗಿತ್ತು.

ಟೈಲ್ಸ್ ಫ್ಯಾಕ್ಟರಿಯಲ್ಲಿ 30 ಜನರು ಕೆಲಸ ಮಾಡುತ್ತಿದ್ದಾರೆ. ಭಾನುವಾರ ಆಗಿದ್ದರಿಂದ 19 ಜನ ಕೆಲಸಕ್ಕೆ ಬಂದಿದ್ದರು. ಇದರಲ್ಲಿ ಬಹುತೇಕ‌ ಜನರು‌ ಉತ್ತರ ಭಾರತದವರೇ ಆಗಿದ್ದಾರೆ. ಕೃತ್ಯ ನಡೆದ ದಿನವೇ 10ರಿಂದ 15 ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.

ಸೂಕ್ತ‌ ಸಾಕ್ಷಿಗಳನ್ನು ಸಂಗ್ರಹಿಸಿ ಇದೀಗ‌ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು‌ ನಗರ ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್ ತಿಳಿಸಿದ್ದಾರೆ.


Spread the love