ಉಳ್ಳಾಲದಿಂದ “ಫಿಟ್ ಇಂಡಿಯ ಫ್ರಿಡಮ್ ರನ್ 3.0” ಚಾಲನೆ

Spread the love

ಉಳ್ಳಾಲದಿಂದ “ಫಿಟ್ ಇಂಡಿಯ ಫ್ರಿಡಮ್ ರನ್ 3.0” ಚಾಲನೆ

ಮಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ “ಫಿಟ್ ಇಂಡಿಯ ಫ್ರಿಡಮ್ ರನ್ 3.0” ಪ್ರಯುಕ್ತ ಅ.2ರಂದು ಭಾನುವಾರ ಉಳ್ಳಾಲ ಸಮುದ್ರ ತೀರದಲ್ಲಿ ಸೈಕಲ್ ಜಾಥ ಫ್ಲಾಗ್ ರನ್, ಫಿಟ್ ಇಂಡಿಯ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ ಎಚ್. ಮತ್ತು ಕರಾವಳಿ ತಟರಕ್ಷಣಾ ಪಡೆ ಇಂಡಿಯನ್ ಕೋಸ್ಟ್ ಗಾರ್ಡ್ ಡಿಐಜಿ ವೆಂಕಟೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ವಚ್ಛತೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ.ಸ್ವಚ್ಛ ಭಾರತ ನಮ್ಮದಾಗಬೇಕು. ಸ್ವಚ್ಛ ವಾದಾಗ ಮಾತ್ರ ನಮ್ಮ ಆರೋಗ್ಯ ಕಾಪಾಡಬಹುದು ಅದರೊಂದಿಗೆ ಅಭಿವೃದ್ಧಿಯನ್ನು ಹೊಂದಬಹುದು ಎಂದು ಕಾರ್ಯಕ್ರಮವನ್ನು ಉಳ್ಳಾಲ ಮಹಾತ್ಮ ಗಾಂಧಿ ರಂಗ ಮಂದಿರ ವಠಾರದಲ್ಲಿ ಉದ್ಘಾಟಿಸಿ ಮಾತಾನಾಡಿದ ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ ಎಚ್. ಹೇಳಿದರು

ಇಂದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದು ಸ್ವಾಗತಾರ್ಹ. ಅದೇ ರೀತಿ ಕಾರ್ಯ ನಿರ್ವಹಣೆ ಮಾಡಿ ಸ್ವಚ್ಛ ಭಾರತ ನಿರ್ಮಾಣ ಮಾಡಬೇಕು.ಈ ಅಭಿಯಾನ ಒಂದು ತಿಂಗಳ ಕಾಲ ನಡೆಯುತ್ತದೆ .ಇದರ ಆರಂಭ ಉಳ್ಳಾಲದಿಂದ ಆಗಲಿದೆ ಎಂದು ಅವರು ಹೇಳಿದರು.

ಅಕ್ಟೋಬರ್ 2ರಿಂದ 30ರ ತನಕ ಈ “ಫಿಟ್ ಇಂಡಿಯ ಫ್ರಿಡಮ್ ರನ್ 3.0” ಅಭಿಯಾನವು ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,.ಉಳ್ಳಾಲ ನಗರಸಭೆ, ರಾಷ್ಟ್ರೀಯ ಸೇವಾ ಯೋಜನೆ, ಯೇನೆಪೋಯ ಹಾಗೂ ನಿಟ್ಟೆ ವಿಶ್ವ ವಿದ್ಯಾನಿಲಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಯೇನೆಪೋಯ ಎನ್ ಎಸ್ ಎಸ್ ಪ್ರೋಗ್ರಾಂ ಕೋ ಆರ್ಡಿನೇಟರ್ ಡಾ.ಅಶ್ವಿನಿ ಶೆಟ್ಟಿ ,ಡೀನ್ ಡಾ. ಸುನೀತಾ ಸಲ್ಡಾನ,ಉಳ್ಳಾಲ ನಗರ ಸಭೆ ಪೌರಾಯುಕ್ತ ವಿದ್ಯಾ ಎಂ ಕಾಳೆ , ಆರೋಗ್ಯ ಅಧಿಕಾರಿ ರವಿ ಕೃಷ್ಣಾ, ನೆಹರೂ ಯುವ ಕೇಂದ್ರ ದಕ್ಷಿಣ ಕನ್ನಡ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ ಪೇಟೆ, ಆಡಳಿತಾಧಿಕಾರಿ ಜಗದೀಶ್ ಕೆ., ನಿಟ್ಟೆ ವಿವಿ ಎನ್ ಎಸ್ ಎಸ್ ಪ್ರೋಗ್ರಾಂ ಕೋ ಆರ್ಡಿನೇಟರ್ ಡಾ.ಶಶಿಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಎಬಿ ಶೆಟ್ಟಿ, ಹಾಗೂ ಯೆನೆಪೋಯ ಎಲೈಡ್ ಸೈನ್ಸ್ ವಿದ್ಯಾರ್ಥಿಗಳು ಭಾಗವಹಿಸಿ ಕಸ ಹೆಕ್ಕುವ ಮೂಲಕ ಉಳ್ಳಾಲ ಬೀಚ್ ಸ್ವಚ್ಛತೆ ಆಂದೋಲನ ನಡೆಸಿದರು.ಇದೇ ಸಂದರ್ಭದಲ್ಲಿ ನಗರ ಸಭೆ ವತಿಯಿಂದ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು.

ಉಳ್ಳಾಲದ ಆರೋಗ್ಯ ನಿರೀಕ್ಷಕ ರವಿ ಹಾಗೂ ಮುರಳಿಧರ ಅವರು ಕಾರ್ಯಕ್ರಮ ನಿರೂಪಿಸಿದರು.


Spread the love