ಉಳ್ಳಾಲ: ಇಂಜಿನ್ ಬಂದ್ ಆಗಿ ಮೀನುಗಾರಿಕಾ ಬೋಟ್ ಪಲ್ಟಿ; ಅಪಾರ ನಷ್ಟ, ಮೀನುಗಾರರು ಪಾರು
ಉಳ್ಳಾಲ: ಹಠಾತ್ತನೆ ಇಂಜಿನ್ ಬಂದ್ ಆದ ಪರಿಣಾಮ ಮೀನುಗಾರಿಕಾ ಬೋಟ್ ಸಮುದ್ರ ತಟದ ಕಲ್ಲು ಬಂಡೆಗಳಿಗೆ ಬಡಿದು ಪಲ್ಟಿ ಹೊಡೆದ ಘಟನೆ ಉಳ್ಳಾಲ ಸೀಗ್ರೌಂಡ್‌ನಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಅಶ್ಫಾಕ್ ಎಂಬವರ ಮಾಲಕತ್ವದ ‘ಬುರಾಖ್’ ಹೆಸರಿನ ಮೀನುಗಾರಿಕಾ ಬೋಟ್ ದುರಂತಕ್ಕೀಡಾಗಿದೆ. ಈ ಸಂದರ್ಭ ಚಾಲಕ ಸಹಿತ ಬೋಟ್‌ನಲ್ಲಿದ್ದ ಹದಿಮೂರು ಮಂದಿ ಮೀನುಗಾರರು ಈಜಿ ದಡ ಸೇರಿದ್ದಾರೆ.
ಇಂದು ಮುಂಜಾನೆ 2.30 ಗಂಟೆಗೆ ಮಂಗಳೂರಿನ ಧಕ್ಕೆಯಿಂದ ಹದಿಮೂರು ಮಂದಿಯನ್ನು ಹೇರಿಕೊಂಡು ಬೋಟ್ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಉಳ್ಳಾಲ ಸೀಗ್ರೌಂಡ್ ಬಳಿ ಬೋಟ್ ನ ಇಂಜಿನ್ ಹಠಾತ್ತಾಗಿ ಆಫ್ ಆಗಿದೆ. ಇದರಿಂದ ನಿಯಂತ್ರಣ ಕಳಕೊಂಡ ಬೋಟ್ ತೀರ ಪ್ರದೇಶದಲ್ಲಿ ಕಡಲ್ಕೊರೆತದ ತಾತ್ಕಾಲಿಕ ತಡೆಗೆಂದು ಹಾಕಲಾಗಿದ್ದ ಕಲ್ಲುಬಂಡೆಗಳಿಗೆ ಬಡಿದು ಪಲ್ಟಿ ಹೊಡೆದಿದೆ ಎಂದು ಬೋಟ್ ನ ವ್ಯವಸ್ಥಾಪಕ ಖಲೀಲ್ ಮಾಹಿತಿ ನೀಡಿದ್ದಾರೆ.
ಘಟನೆಯಿಂದ ಬೋಟ್ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು ಮೀನಿನ ಬಲೆ,ಇನ್ನಿತರ ಬೆಲೆಬಾಳುವ ಸೊತ್ತು ಸೇರಿ ಸುಮಾರು ಒಂದೂವರೆ ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. .ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.