ಉಳ್ಳಾಲ: ಧರೆಗುರುಳಿದ ದುರಸ್ತಿಯಲ್ಲಿದ್ದ ಮನೆ ಬಡ ಮಹಿಳೆಯರು ಕಂಗಾಲು

Spread the love

ಉಳ್ಳಾಲ: ಧರೆಗುರುಳಿದ ದುರಸ್ತಿಯಲ್ಲಿದ್ದ ಮನೆ ಬಡ ಮಹಿಳೆಯರು ಕಂಗಾಲು

ಉಳ್ಳಾಲ: ಮಹಿಳೆಯರಿಬ್ಬರು ವಾಸವಿದ್ದ ಮನೆಯು ಭಾರೀ ಮಳೆಗೆ ಧರೆಗುರುಳಿದೆ. ದುರಸ್ತಿ ಕಾರ್ಯ ಕೈಗೊಂಡಿದ್ದ ಸಂದರ್ಭದಲ್ಲೇ ಘಟನೆ ನಡೆದಿದ್ದರಿಂದ ಮನೆಯಲ್ಲಿ ಯಾರೂ ಇಲ್ಲದೆ ಸಂಭಾವ್ಯ ಅನಾಹುತ ತಪ್ಪಿದೆ.

ಸೋಮೇಶ್ವರದ ಉಳ್ಳಾಲ ರೈಲ್ವೇ ನಿಲ್ದಾಣದ ಹಿಂಬದಿಯ ಶೋಭಾ ಅವರ ಮನೆ ನಿನ್ನೆ ರಾತ್ರಿ ಸುರಿದ ಗಾಳಿ,ಮಳೆಗೆ ಧರೆಗೆ ಉರುಳಿದೆ. ಶೋಭಾ ಅವರ ಪತಿ ಕೆಲ ವರುಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಶೋಭಾ ಅವರು ತನ್ನ ಸಹೋದರ ವಸಂತ್ ಮತ್ತು ಆತನ ಪತ್ನಿ ಹೇಮಾ ಜೊತೆ ವಾಸವಿದ್ದರು.ವರುಷದ ಹಿಂದೆ ಮನೆಗೆ ಆಧಾರ ಸ್ತಂಭವಾಗಿದ್ದ ಶೋಭಾರ ಸಹೋದರ ವಸಂತ್ ಅವರೂ ನೀರಿಗೆ ಬಿದ್ದು ಆಕಸ್ಮಿಕವಾಗಿ ಮೃತ ಪಟ್ಟಿದ್ದರು.

ಶೋಭಾ ಅವರು ತನ್ನ ಸಹೋದರನ ಪತ್ನಿ ಹೇಮ ಮತ್ತು ಆಕೆಯ ಏಕೈಕ ಗಂಡು ಮಗು ಜೊತೆ ನಾದುರಸ್ತಿಯಲ್ಲಿರುವ ಮನೆಯಲ್ಲಿ ವಾಸವಿದ್ದರು. ಈ ಬಡ ಕುಟುಂಬದ ಬಗ್ಗೆ ಮಾನವೀಯತೆ ತೋರಿಸಿದ ಸ್ಥಳೀಯ ರಕ್ತೇಶ್ವರಿ ಬಳಗ ಮನೆಯ ದುರಸ್ತಿ ಕಾರ್ಯ ಕೈಗೆತ್ತುವ ಸಲುವಾಗಿ ಕುಟುಂಬವನ್ನು ಹತ್ತಿರದ ಮನೆಯೊಂದಕ್ಕೆ ಸ್ಥಳಾಂತರಿಸಿದ್ದರು. ಘಟನೆ ನಡೆದ ಸಂದರ್ಭ ಕುಟುಂಬ ಸದಸ್ಯರು ಮನೆಯಲ್ಲಿರದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ .ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡ ವಿಧವೆಯರ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸಲು ರಕ್ತೇಶ್ವರಿ ಬಳಗದ ಸದಸ್ಯರು ಮುಂದಾಗಿದ್ದು ಕುಟುಂಬಕ್ಕೆ ಸರಕಾರ ಮತ್ತು ದಾನಿಗಳ ಸಹಕಾರ ಯಾಚಿಸಿದ್ದಾರೆ.

ಉಳ್ಳಾಲ:  ಮನೆ ಗೋಡೆ ಕುಸಿತ ಮನೆಮಂದಿ ಪಾರು

ಮನೆಮಂದಿ ಮನೆಯೊಳಗಿದ್ದ ಸಂದರ್ಭದಲ್ಲೇ ವಾಸದ ಮನೆಯ  ಗೋಡೆ ಕುಸಿದು ಮನೆಮಂದಿ ಪವಾಡಸದೃಶವಾಗಿ ಪಾರಾಗಿರುವ ಘಟನೆ ಕೋಟೆಪುರದಲ್ಲಿ ಸಂಭವಿಸಿದೆ.

ರುಕಿಯ- ಉಮರಬ್ಬ ದಂಪತಿಗೆ ಸೇರಿದ ಮನೆಯ ಗೋಡೆ ಭಾಗಶ: ಕುಸಿದಿದೆ. ಎರಡು ದಿನಗಳ ಭಾರೀ ಮಳೆಯಿಂದ ಮಂಗಳವಾರ ಮನೆಮಂದಿ ಒಳಗಿರುವಾಗಲೇ ಗೋಡೆ ಕುಸಿದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಮನೆಮಂದಿ ಹೊರ ಓಡಿ ಬಂದಿದ್ದಾರೆ.  ಘಟನೆಯಿಂದ ಮನೆಯೊಳಗಿದ್ದವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.


Spread the love