ಉಸ್ತುವಾರಿ ಸಚಿವರಾದ ಬಳಿಕ ಉಡುಪಿಗೆ ಪ್ರಥಮ ಬಾರಿಗೆ ಆಗಮಿಸಿದ ಬೊಮ್ಮಾಯಿ ಗೆ ಸ್ವಾಗತ
ಉಡುಪಿ: ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ಬಳಿಕ ಶುಕ್ರವಾರ ಪ್ರಥಮ ಬಾರಿ ಜಿಲ್ಲೆಗೆ ಆಗಮಿಸಿದರು.
ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿ ಜಿಲ್ಲೆಗೆ ಆಗಮಿಸಿದ ಸಚಿವರನ್ನು ಜಿಲ್ಲಾಡಳಿತದ ಪರವಾಗಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್, ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಕರಾವಳಿ ಕಾವಲು ಪೊಲೀಸ್ ಪಡೆಯ ವರಿಷ್ಠಾಧಿಕಾರಿ ಚೇತನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು.
ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವರು ,ಪೊಲೀಸರ ವೇತನ ಪರಿಷ್ಕರಣೆ ವಿಚಾರವಾಗಿ ಕೆಲವಿಷಯಗಳನ್ನು ಹಂಚಿಕೊಂಡರು.ಖಂಡಿತವಾಗಿಯೂ ಔರಾದ್ಕರ್ ವರದಿ ಜಾರಿಯಾಗುತ್ತದೆ.
ಔರಾದ್ಕರ್ ವರದಿಗೆ ಎರಡು ಹಂತದಲ್ಲಿ ಸಚಿವ ಸಂಪುಟ ಒಪ್ಪಿಗೆಯನ್ನೂ ಕೊಟ್ಟಿದೆ.ಆದ್ರೆ ಜೈಲು ಸಿಬ್ಬಂದಿ ಮತ್ತು ಫೈಯರ್ ಫೋರ್ಸ್ ಬಿಟ್ಟು ಹೋಗಿತ್ತು. ನಮ್ಮ ಕ್ಯಾಬಿನೆಟ್ ನಲ್ಲಿ ಅವಕ್ಕೂ ಒಪ್ಪಿಗೆ ಕೊಟ್ಟಿದ್ದೇವೆ.ಆರ್ಥಿಕ ಇಲಾಖೆಯಿಂದ ಕೆಲವು ಸ್ಪಷ್ಟನೆ ಕೇಳಿದ್ದೇವೆ.ಇನ್ನೊಂದು ವಾರದೊಳಗೆ ಸ್ಪಷ್ಟವಾದ ಸುತ್ತೋಲೆ ಹೊರಡಿಸ್ತೇವೆ ಎಂದು ಹೇಳಿದರು.
ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು ,ಎಲ್ಲಾ ಮಾಹಿತಿಗಳು ಸಿಬಿಐ ಬಳಿ ಇರುತ್ತವೆ.ಅಧಿಕೃತವಾಗಿ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಗೃಹ ಸಚಿವನಾಗಿ ಊಹಾಪೋಹಗಳಿಗೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ.
ಎಸ್ ಐಟಿ ಮಾಡಿರುವ ತನಿಖೆಯ ಸಂಪೂರ್ಣ ವಿವರ ಸಿಬಿಐ ಗೆ ನೀಡಿದ್ದೇವೆ.ಆದರೆ ಅನುಮತಿ ಇಲ್ಲದೆ ಯಾವುದೇ ವ್ಯಕ್ತಿಯ ಖಾಸಗಿ ಮಾತುಕತೆಯ ಕದ್ದಾಲಿಕೆ ಮಾಡುವುದು ತಪ್ಪು ಎಂದು ಹೇಳಿದರು. ಪ್ರಭಾವ ಬಳಸಿ ಉಪ ಚುನಾವಣೆ ಮುಂದೂಡಲಾಗಿದೆ ಎಂಬ ಕುಮಾರಸ್ವಾಮಿ ಆರೋಪದ ಕುರಿತು ಕೇಳಿದ್ದಕ್ಕೆ ,ಕುಮಾರಸ್ವಾಮಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದಷ್ಟೇ ಚುಟುಕಾಗಿ ಪ್ರತಿಕ್ರಿಯೆ ನೀಡಿದರು.
ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಇತರರು ಉಪಸ್ಥಿತರಿದ್ದರು.