ಊರಿಗೆ ಬೇಲಿ ಹಾಕಬೇಡಿ ಎಂದಿದ್ದಕ್ಕೆ ಕಾರು ಹತ್ತಿಸಿ ಕೊಂದುಬಿಟ್ಟ ಗ್ರಾ.ಪಂ ಅಧ್ಯಕ್ಷ!?

Spread the love

ಊರಿಗೆ ಬೇಲಿ ಹಾಕಬೇಡಿ ಎಂದಿದ್ದಕ್ಕೆ ಕಾರು ಹತ್ತಿಸಿ ಕೊಂದುಬಿಟ್ಟ ಗ್ರಾ.ಪಂ ಅಧ್ಯಕ್ಷ!?

  • ಅನ್ಯಾಯ, ಅಕ್ರಮಗಳ ವಿರುದ್ದ ಸೋಶೀಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದಕ್ಕೆ ಕೊಲೆ?
  • ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರು ಬಿಟ್ಟು ಪರಾರಿ
  • ಸಾಮಾಜಿಕ ಕಾರ್ಯಕರ್ತ ಉದಯ್ ಗಾಣಿಗ ಸಾವು

ಕುಂದಾಪುರ: ಕುಂದಾಪುರ: ಗ್ರಾ.ಪಂ ಅನ್ಯಾಯ, ಅಕ್ರಮಗಳ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಬರೆಹ ಪ್ರಕಟಿಸಿ ಪ್ರಶ್ನಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತನೋರ್ವನ ಮೇಲೆ ಗ್ರಾ.ಪಂ ಅಧ್ಯಕ್ಷ ಕಾರು ಚಲಾಯಿಸಿ ಕೊಲೆಗೈದ ದಾರುಣ ಘಟನೆ ಯಡಮೊಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಬಾಳು ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.

ಇಲ್ಲಿನ ಹೊಸಬಾಳು ನಿವಾಸಿ ಉದಯ ಗಾಣಿಗ (40) ಮೃತ ದುರ್ದೈವಿ. ಆರೋಪಿ ಯಡಮೊಗೆ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಘಟನೆಯ ಬಳಿಕ ಕಾರು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆೆ. ರಾತ್ರಿ 8 ಗಂಟೆ ಸುಮಾರಿಗೆ ತನ್ನ ಮನೆಯ ಎದುರಿನ ರಸ್ತೆಯ ಮೇಲೆ ನಿಂತಿದ್ದ ಉದಯ್ ಗಾಣಿಗರ ಮೇಲೆ ಪ್ರಾಣೇಶ್ ಯಡಿಯಾಳ ಏಕಾಏಕಿಯಾಗಿ ಕಾರು ಚಲಾಯಿಸಿದ್ದಾನೆ. ಕಾರು ಉದಯ್ ಗಾಣಿಗ ಅವರ ಮೈಮೇಲೆ ಹತ್ತಿ ಹೋಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ಸ್ಥಳೀಯ ನಿವಾಸಿಗಳು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯುವ ಯತ್ನ ನಡೆಸಿದರಾದರೂ ದಾರಿ ಮಧ್ಯೆಯೇ ಉದಯ್ ಕೊನೆಯುಸಿರೆಳೆದಿದ್ದಾರೆ.

ಮೃತ ಉದಯ್ ವಿವಾಹಿತರಾಗಿದ್ದು, ಪತ್ನಿ, ಎರಡು ಮಕ್ಕಳು, ಕುಟುಂಬಿಕರು ಹಾಗೂ ಅಪಾರ ಸ್ನೇಹಬಳಗವನ್ನು ಅಗಲಿದ್ದಾರೆ.

ಅನ್ಯಾಯಗಳನ್ನು ಪ್ರಶ್ನಿಸಿದ್ದಕ್ಕೆ ಕೊಲೆ?

ಜಡ್ಕಲ್‌ನಲ್ಲಿ ಕೃಷಿ ಕೇಂದ್ರವನ್ನು ಹೊಂದಿರುವ ಉದಯ್ ಗಾಣಿಗ ಬಿಜೆಪಿಯ ಅಪ್ಪಟ ಕಾರ್ಯಕರ್ತ. ಕಳೆದ ಕೆಲ ದಿನಗಳಿಂದ ಕಟ್ಟುನಿಟ್ಟಿನ ಲಾಕ್‌ಡೌನ್ ಬಗ್ಗೆ ಜನರು, ಕೂಲಿ ಕಾರ್ಮಿಕರಿಗಾಗುತ್ತಿರುವ ತೊಂದರೆಗಳ ಬಗ್ಗೆ ಉದಯ್ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿದ್ದರು. ಅಲ್ಲದೇ ಶುಕ್ರವಾರ ರಾತ್ರಿಯಷ್ಟೇ ಉದಯ್ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಯಡಮೊಗೆ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸಲಹೆ ನೀಡುವವ ಬರಹವೊಂದು ಬರೆದುಕೊಂಡಿದ್ದರು. ಆ ಬರಹದಲ್ಲಿ ಊರಿಗೆ ಬೇಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವ ಮೊದಲು ಯಡಮೊಗೆಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಸಿಗುವ ಹಾಗೆ ಮಾಡಿ. ಆಸ್ಪತ್ರೆಗೆ ಬೆಡ್ ವ್ಯವಸ್ಥೆ ಮಾಡಿ, ಪಾಸಿಟಿವ್ ಬಂದವನ್ನು ಆಸ್ಪತ್ರೆಗೆ ಸೇರಿಸಿ ಗುಣಮುಖರಾದವರನ್ನು ಮನೆಗೆ ಕಳುಹಿಸಿಕೊಡಿ. ಬಡ ಕೂಲಿ ಕಾರ್ಮಿಕರು ಊಟಕ್ಕೆ ಏನು ಮಾಡುತ್ತಿದ್ದಾರೆ ಅವರ ಸಮಸ್ಯೆಗಳನ್ನು ವಿಚಾರಿಸಿ. ಇದನ್ನು ಬಿಟ್ಟು ಊರಿಗೆ ಬೇಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳಬೇಡಿ. ಇದರಿಂದ ಸರ್ಕಾರದ ಹಣ ನುಂಗಿ ನೀರು ಕುಡಿಯುವುದು ಬಿಟ್ಟು ಬೇರೇನು ಪ್ರಯೋಜನವಿಲ್ಲ ಎಂದು ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದೇ ವಿಚಾರವಾಗಿ ಉದಯ್ ಗಾಣಿಗ ಮೇಲೆ ಕಾರು ಹತ್ತಿಸಿ ಅವರನ್ನು ಕೊಲೆಗೈಯ್ಯಲಾಗಿದೆ ಎಂಬ ಬಲವಾದ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಮೇಲ್ನೋಟಕ್ಕೆ ಗಮನಿಸಿದರೆ ಇದೊಂದು ಅಪಘಾತವಲ್ಲ ಕೊಲೆ ಎಂಬುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿಗಳು ಪೊಲೀಸ್ ತನಿಖೆಯಿಂದ ಇನ್ನಷ್ಟೆ   ತಿಳಿದುಬರಬೇಕಿದೆ.


Spread the love