
ಎಂ.ಎಲ್.ಸಿ ಭಿಕ್ಷೆ ಎಂದವರಿಗೆ ಎಚ್.ವಿಶ್ವನಾಥ್ ತಿರುಗೇಟು!
ಮೈಸೂರು: ಮುಖ್ಯಮಂತ್ರಿ, ಸ್ವಪಕ್ಷದ ನಾಯಕರು ಸೇರಿದಂತೆ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿ ಇರಿಸು ಮುರಿಸನ್ನುಂಟು ಮಾಡಿದ್ದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಮತ್ತೆ ವಾಗ್ದಾಳಿ ಮುಂದುವರೆಸಿದ್ದು, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ನಮ್ಮ ತ್ಯಾಗದಿಂದ ರಚನೆಯಾಗಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮ ನಿಮಿತ್ತ ಪಿರಿಯಾಪಟ್ಟಣಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸರ್ಕಾರ ವಿರುದ್ಧದ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಬಿಜೆಪಿ ಮತ್ತು ಯಡಿಯೂರಪ್ಪನವರಿಂದ ಪಡೆದ ವಿಧಾನ ಪರಿಷತ್ ಸದಸ್ಯತ್ವ ಸ್ಥಾನದ ಭಿಕ್ಷೆಯನ್ನು ರಾಜೀನಾಮೆ ಮೂಲಕ ಹಿಂದಿರುಗಿ ಎಂದು ಕೆಆರ್ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ನೇತೃತ್ವದಲ್ಲಿ 11 ನಿಗಮ ಮಂಡಳಿಗಳ ಅಧ್ಯಕ್ಷರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ವಿಧಾನಪರಿಷತ್ ಸ್ಥಾನ ನಮ್ಮ ತ್ಯಾಗದ ಪ್ರತಿಫಲ ಅವರ ಅಪ್ಪನ ಮನೆಯಿಂದ ಯಾರು ತಂದುಕೊಟ್ಟಿದ್ದಲ್ಲ ಎಂದು ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿಯಾದಿಯಾಗಿ ಸರ್ಕಾರದ ಅಂಗವಾಗಿರುವ ಎಲ್ಲರೂ ನಮ್ಮ ಮರ್ಜಿನಲ್ಲಿದ್ದಾರೆಯೇ ಹೊರತು ನಾನು ಅವರ ಮರ್ಜಿಯಲ್ಲಿಲ್ಲ. ಈಗಿನ ಬಿಜೆಪಿ ಸರ್ಕಾರ ನಮ್ಮ ತ್ಯಾಗದಿಂದ ರಚನೆಯಾದದ್ದು, ಸರ್ಕಾರದಲ್ಲಿ ಸಚಿವರು, ನಿಗಮ ಮಂಡಳಿ ಅಧ್ಯಕ್ಷ ಸದಸ್ಯರಾಗಿರುವ ಎಲ್ಲರೂ ಸೀದಾ ಬಂದವರಲ್ಲ. ಅವರೆಲ್ಲರೂ ನಮ್ಮ ತ್ಯಾಗದಿಂದ ಅಧಿಕಾರ ಪಡೆದಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ವಿಧಾನ ಪರಿಷತ್ ಸ್ಥಾನ ನನಗೆ ಭಿಕ್ಷೆ ಎಂದು ಹೇಳುವವರೇನು ಅವರಪ್ಪನ ಮನೆಯಿಂದ ತಂದು ಕೊಟ್ಟಿಲ್ಲ. ನಮ್ಮ ತ್ಯಾಗಕ್ಕೆ ಸಿಕ್ಕ ಪ್ರತಿಫಲವಷ್ಟೆ. ನನ್ನ ಬಗ್ಗೆ ಮಾತನಾಡಲು ಅವರಿಗೆ ಏನು ಅಧಿಕಾರವಿದೆ ಎಂದು ಪ್ರಶ್ನಿಸಿದ್ದಾರೆ.