Home Mangalorean News Kannada News ಎಂ.ಡಿ.ಎಂ.ಎ ಸಾಗಾಟ ಪತ್ತೆ: ಮೂವರು ಆರೋಪಿಗಳ ಬಂಧನ, ₹7.64 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಎಂ.ಡಿ.ಎಂ.ಎ ಸಾಗಾಟ ಪತ್ತೆ: ಮೂವರು ಆರೋಪಿಗಳ ಬಂಧನ, ₹7.64 ಲಕ್ಷ ಮೌಲ್ಯದ ಮಾದಕ ವಸ್ತು ವಶ

Spread the love

ಎಂ.ಡಿ.ಎಂ.ಎ ಸಾಗಾಟ ಪತ್ತೆ: ಮೂವರು ಆರೋಪಿಗಳ ಬಂಧನ, ₹7.64 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಬಂಟ್ವಾಳ:  ಎಂ.ಡಿ.ಎಂ.ಎ ಮಾದಕ ವಸ್ತುವನ್ನು ಸಾಗಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದು, ಅವರಿಂದ ₹7.64 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಜೂನ್ 4ರಂದು ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರು ಠಾಣಾ ಸಿಬ್ಬಂದಿಗಳೊಂದಿಗೆ ಮೆಲ್ಕಾರ್ ಫ್ಲೈಓವರ್ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಾಸ್ಪದ ಕಾರೊಂದನ್ನು ತಡೆದು ಪರಿಶೀಲಿಸಿದರು. ಕಾರಿನಲ್ಲಿ ಚಾಲಕ ಸೇರಿದಂತೆ ಮೂವರು ವ್ಯಕ್ತಿಗಳು ಪ್ರಯಾಣಿಸುತ್ತಿದ್ದು, ಪರಿಶೀಲನೆ ವೇಳೆ ಮಾದಕ ವಸ್ತು ಸೇವನೆಗೆ ಬಳಸುವ ಸಾಧನವೊಂದು ಪತ್ತೆಯಾಯಿತು.

ಈ ಬಗ್ಗೆ ವಿಚಾರಣೆ ನಡೆಸಿದಾಗ, ಆರೋಪಿಗಳು ಬಂಟ್ವಾಳ ಪುದು ನಿವಾಸಿ ಎ. ಜುಬೈರ್ (39), ಸಜಿಪ ಮುನ್ನೂರು ನಿವಾಸಿ ಮೊಹಮ್ಮದ್ ಸವಾದ್ (36) ಹಾಗೂ ಬಿ. ಮೂಡ ನಿವಾಸಿ ಬಿ.ಎಂ. ರಶೀದ್ ಅಲಿಯಾಸ್ ಮಾರಿಮುತ್ತು ಎಂದು ಗುರುತಿಸಲ್ಪಟ್ಟಿದ್ದಾರೆ.

ಆರೋಪಿಗಳು ಎಂ.ಡಿ.ಎಂ.ಎ ಮಾದಕ ದ್ರವ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ಬಳಿಕ ನಡೆಸಿದ ತಪಾಸಣೆಯಲ್ಲಿ ಅವರ ಬಳಿ ಹಾಗೂ ಕಾರಿನಲ್ಲಿ ಅಂದಾಜು ₹7,64,000 ಮೌಲ್ಯದ 76 ಗ್ರಾಂ 40 ಮಿಲಿಗ್ರಾಂ ಎಂ.ಡಿ.ಎಂ.ಎ ಮಾದಕ ದ್ರವ್ಯ ಪತ್ತೆಯಾಗಿದೆ.

ಪೊಲೀಸರು ಮಾದಕ ವಸ್ತುವಿನ ಜೊತೆಗೆ ಮಾದಕ ವಸ್ತು ಸೇವನೆಗೆ ಬಳಸುವ ಸಾಧನ, ಆರೋಪಿಗಳ ಬಳಿಯಿದ್ದ ಮೂರು ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ KA-19 MR-1997 ನೋಂದಣಿಯ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.


Spread the love

Exit mobile version