ಎಐಸಿಸಿ ಸೆಕ್ರೆಟರಿ ವೇಣುಗೋಪಾಲ್ ಎದುರಲ್ಲಿ ಡಿಕೆ ಘೋಷಣೆ ; ಪಕ್ಷದ ಶಿಸ್ತು ಉಲ್ಲಂಘನೆ, ಕಾರಣ ಕೇಳಿ ಕಾಂಗ್ರೆಸ್ ಮುಖಂಡ ಮಿಥುನ್ ರೈಗೆ ನೋಟಿಸ್ ಜಾರಿ
ಮಂಗಳೂರು: ಎಐಸಿಸಿ ಸೆಕ್ರೆಟರಿ ಕೆ.ಸಿ ವೇಣುಗೋಪಾಲ್ ಮೊನ್ನೆ ಮಂಗಳೂರಿಗೆ ಬಂದಿದ್ದಾಗ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಡಿಕೆ ಡಿಕೆ ಎಂದು ಘೋಷಣೆ ಕೂಗಿ ಮುಜುಗರ ಸೃಷ್ಟಿಸಿದ ಘಟನೆ ನಡೆದಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಾರಣ ಕೇಳಿ ಮಿಥುನ್ ರೈಗೆ ನೋಟಿಸ್ ಜಾರಿ ಮಾಡಿದೆ.
ಡಿ.3ರಂದು ಮಂಗಳೂರಿನಲ್ಲಿ ನಡೆದ ಗಾಂಧಿ- ಗುರು ಸಂವಾದ ಶತಾಬಿ ಕಾರ್ಯಕ್ರಮಕ್ಕೆ ಕೆಸಿ ವೇಣುಗೋಪಾಲ್ ಆಗಮಿಸಿದ್ದರು. ಈ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಸ್ವತಃ ಶಾಲು ಹಾಕಿ ವೇಣುಗೋಪಾಲ್ ಅವರನ್ನು ಸ್ವಾಗತಿಸಿದ್ದು ಈ ವೇಳೆ ಜೊತೆಗಿದ್ದ ಮಿಥುನ್ ಬೆಂಬಲಿಗರು ಡಿಕೆಶಿ ಪರವಾಗಿ ಘೋಷಣೆ ಕೂಗಿದ್ದರು. ಹೊರಗೆ ವೇಣುಗೋಪಾಲ್ ಕಾರಿನ ಸುತ್ತಲೂ ಕಾರ್ಯಕರ್ತರು ಜಮಾಯಿಸಿ ಡಿಕೆ ಡಿಕೆ ಘೋಷಣೆ ಹಾಕಿದ್ದರು.
ಇದರಿಂದ ಹೈಕಮಾಂಡ್ ಮಟ್ಟದ ನಾಯಕನಿಗೆ ತೀವ್ರ ಮುಜುಗರ ಸೃಷ್ಟಿಯಾಗಿತ್ತು. ನಾಯಕತ್ವ ಬದಲಾವಣೆ ವಿಚಾರ ತೀವ್ರ ಚರ್ಚೆಗೀಡಾಗಿರುವ ನಡುವಲ್ಲೇ ಡಿಕೆಶಿ ಸಿಎಂ ಆಗಬೇಕೆಂದು ಹೇಳಿ ಕಾರ್ಯಕರ್ತರು ಸುತ್ತುವರಿದು ಘೋಷಣೆ ಹಾಕಿ, ಪರೋಕ್ಷವಾಗಿ ಕೇಂದ್ರ ನಾಯಕರ ಮೇಲೆ ಒತ್ತಡ ತಂತ್ರ ಹಾಕಿದ್ದರು. ಆಮೂಲಕ ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈಗೆ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ನೋಟೀಸ್ ಜಾರಿ ಮಾಡಿದ್ದು, ಘಟನೆ ಬಗ್ಗೆ ಸೂಕ್ತ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.
ಕೆಸಿ ವೇಣುಗೋಪಾಲ್ ಮೂಲತಃ ಕೇರಳದವರಾಗಿದ್ದು, ಮಂಗಳೂರಿನ ಕಾರ್ಯಕ್ರಮ ಮುಗಿಸಿ ರಸ್ತೆ ಮೂಲಕ ಕಾಸರಗೋಡಿಗೆ ತೆರಳಿದ್ದರು. ಆದರೆ ಮಂಗಳೂರಿಗೆ ಬಂದಿದ್ದಾಗ ಡಿಕೆಶಿ ಪರವಾಗಿ ಒತ್ತಡ ಹಾಕಿರುವುದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ ಎನ್ನುವ ನೆಪದಲ್ಲಿ ಈಗ ಡಿಕೆಶಿ ಬಂಟನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಮಿಥುನ್ ರೈ ಮಂಗಳೂರು ಕಾಂಗ್ರೆಸಿನಲ್ಲಿ ಪ್ರಭಾವಿಯಾಗಿದ್ದು ಡಿಕೆಶಿ ಬಣದಲ್ಲಿ ಗುರುತಿಸಿದ್ದಾರೆ.
ಮೊನ್ನೆ ಡಿಕೆಶಿ ಪರ ಘೋಷಣೆ ಕೂಗಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದ ಮಿಥುನ್ ರೈ, ಸಿದ್ದರಾಮಯ್ಯ ರಾಜ್ಯ ಕಂಡ ಮಹಾನ್ ನಾಯಕ. ಆದರೆ ಅಧಿಕಾರ ಹಂಚಿಕೆಯಾಗಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ನಾವು ತುಂಬ ಸಂತೋಷ ಪಡುತ್ತೇವೆ. ಹಾಗಾಗಿ, ಡಿಕೆಶಿ ನಾಳೆಯೇ ಸಿಎಂ ಆಗಲೆಂದು ಹಾರೈಸುತ್ತೇನೆ ಎಂದು ಹೇಳಿದ್ದರು. ಕೆಲಹೊತ್ತಿನಲ್ಲೇ ಏರ್ಪೋಟ್್ರ ಆಗಮಿಸಿದ್ದ ಸಿದ್ದರಾಮಯ್ಯ ಪರವಾಗಿಯೂ ಎಂಎಲ್ಸಿ ಐವಾನ್ ಡಿಸೋಜ ನೇತೃತ್ವದಲ್ಲಿ ಸಿದ್ದರಾಮಯ್ಯ ಫುಲ್ ಟೈಂ ಸಿಎಂ ಆಗಬೇಕೆಂದು ಘೋಷಣೆ ಹಾಕಲಾಗಿತ್ತು.
