
ಎಕ್ಸ್‌ಪ್ರೆಸ್ ಹೈವೆಯಲ್ಲಿ ಕಾರು ಅಡ್ಡಗಟ್ಟಿ ದರೋಡೆ
ರಾಮನಗರ: ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಎಚ್ಚರವಾಗಿರ ಬೇಕಾಗಿದೆ. ಕಾರಣ ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಐಟಿಸಿ ಕಂಪನಿ ನೌಕರನ ಕಾರು ಅಡ್ಡಗಟ್ಟಿ 1.50 ಲಕ್ಷ ರೂ.ಮೌಲ್ಯದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.
ಈ ಘಟನೆ ಕನ್ನಮಂಗಲ ಗ್ರಾಮದ ಸಮೀಪ ನಡೆದಿದ್ದು ಈ ಘಟನೆ ಬಳಿಕ ಜನ ಬೆಚ್ಚಿ ಬಿದ್ದಿದ್ದಾರೆ. ಪೊಲೀಸರಂತೆ ತಪಾಸಣೆ ಮಾಡಲು ಬಂದ ನಾಲ್ಕು ಮಂದಿ ಆಗಂತುಕರು ಕಾರು ಚಾಲಕನನ್ನು ಅಡ್ಡಗಟ್ಟಿ 30 ಗ್ರಾಂ ತೂಕದ ಚಿನ್ನಾಭರಣವನ್ನು ದೋಚಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ಲೇಔಟ್‌ನ ನಿವಾಸಿ ಧನುಷ್ ಎಂಬುವರು ದರೋಡೆಗೆ ಒಳಗಾದವರು.
ಐಟಿಸಿ ಕಂಪನಿಯಲ್ಲಿ ಎಚ್.ಆರ್ ಆಗಿ ಕೆಲಸ ಮಾಡುತ್ತಿರುವ ಧನುಷ್, ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಹೋಗಿ ಜು.7 ರಂದು ರಾತ್ರಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಇವರ ಕಾರನ್ನು ಎರಡು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ಕು ಮಂದಿ ಆಗಂತುಕರು ಕನ್ನಮಂಗಲ ಗ್ರಾಮದ ಸಮೀಪ ಅಡ್ಡಗಟ್ಟಿದ್ದಾರೆ. ಕಾರನ್ನು ನಿಲ್ಲಿಸುತ್ತಿದ್ದಂತೆ ನಾವು ಪೊಲೀಸರು ನೀವು ಎಲ್ಲಿಂದ ಬರುತ್ತಿದ್ದೀರಿ ಎಂದು ಪ್ರಶ್ನಿಸಿದ ದುಷ್ಕರ್ಮಿಗಳು ಧನುಷ್ ಅವರ ಮೇಲೆ ಏಕಾಏಕಿ ಹಲ್ಲೆಮಾಡಿ ಕುತ್ತಿಗೆಯಲ್ಲಿದ್ದ ಡಾಲರ್ ಸಹಿತ 30 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬಳಿಕ ಬೆಂಗಳೂರಿಗೆ ತೆರಳಿದ ಅವರು ತಮ್ಮ ಸ್ನೇಹಿತರ ಜೊತೆ ಘಟನೆಯ ಬಗ್ಗೆ ಚರ್ಚಿಸಿ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಡವಾಗಿ ಬಂದು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎಕ್ಸ್‌ಪ್ರೆಸ್ ವೇನಲ್ಲಿ ಒಂದು ವಾರದ ಅಂತರದಲ್ಲಿ 3 ಡರೋಡೆ ಪ್ರಕರಣಗಳ ನಡೆದಿವೆ. ಈ ದರೋಡೆ ಪ್ರಕರಣಗಳಲ್ಲಿ ಸಹ ದರೋಡೆ ಕೋರರು ಪೊಲೀಸರು ಎಂದು ಹೇಳಿಕೊಂಡು ದರೋಡೆ ಮಾಡಿದ್ದರು. ಈ ಸಂಬಂಧ ನಾಲ್ಕು ಮಂದಿಯನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. ಇವರ ಬಂಧನದ ಬಳಿಕ ಹೆದ್ದಾರಿಯಲ್ಲಿ ದರೋಡೆ ಪ್ರಕರಣಗಳು ಕಡಿಮೆಯಾಗಿತ್ತು. ಇದೀಗ ಮತ್ತೆ ಆರಂಭಗೊಂಡಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.