ಎಕ್ಸ್ ಪ್ರೆಸ್ ವೇ ಸರ್ವಿಸ್ ರಸ್ತೆ ಗುಂಡಿಗೆ ಬಿದ್ದ ಹಸು

Spread the love

ಎಕ್ಸ್ ಪ್ರೆಸ್ ವೇ ಸರ್ವಿಸ್ ರಸ್ತೆ ಗುಂಡಿಗೆ ಬಿದ್ದ ಹಸು

ರಾಮನಗರ: ಮೇಯಲು ಹೋಗಿದ್ದ ಹಸುವೊಂದು ಕಾಮಗಾರಿ ಅಪೂರ್ಣವಾಗಿದ್ದ ಕೊರಕಲು ಗುಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ನಗರದ ಕೊಂಕಾಣಿದೊಡ್ಡಿ ಸಮೀಪ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ನಡೆದಿದ್ದು, ಹಸುವನ್ನು ಸುರಕ್ಷಿತವಾಗಿ ಮೇಲೆತ್ತಲಾಗಿದೆ.

ನಗರದ ಕೊಂಕಾಣಿದೊಡ್ಡಿಯ ಅಂಡರ್ ಪಾಸ್ ಸಮೀಪ ಇರುವ ಶ್ರೀರಾಮದೇವರ ಬೆಟ್ಟದ ರಸ್ತೆಯ ತಿರುವಿನಲ್ಲಿ ಕಾಮಗಾರಿ ಪೂರ್ಣ ಮಾಡದೆ ಅರ್ಧಕ್ಕೆ ನಿಲ್ಲಿಸಿದ್ದ ಚರಂಡಿಗೆ ಹಸುವೊಂದು ಆಯತಪ್ಪಿ ಬಿದ್ದಿತ್ತು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ಸಿಲುಕಿದ್ದ ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸಿತ್ತು. ತಕ್ಷಣವೇ ರೈತರು ಜೆಸಿಬಿ ಯಂತ್ರದ ಸಹಾಯದಿಂದ ಸುತ್ತಲೂ ಇದ್ದ ಡಾಂಬರು ಮತ್ತು ಮಣ್ಣು ತೆಗೆದು ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆಳೆದರು.

ಕೊಂಕಾಣಿದೊಡ್ಡಿಯ ರೈತ ಸಿದ್ಧಯ್ಯ ಎಂಬುವರಿಗೆ ಸೇರಿದ ಹಸುವನ್ನು ಜಮೀನಿನಲ್ಲಿ ಮೇಯಲು ಬಿಟ್ಟಿದ್ದು ಸರ್ವಿಸ್ ರಸ್ತೆಯ ಪಕ್ಕದಲ್ಲಿ ಮೇಯುತ್ತಿದ್ದ ಹಸು ಹಠಾತ್ ಆಯತಪ್ಪಿ ಕೊರಕಲು ಗುಂಡಿಗೆ ಬಿದ್ದು ಚರಂಡಿಯೊಳಕ್ಕೆ ಜಾರಿ ಹೋಗಿತ್ತು. ಚರಂಡಿಯೊಳಗೆ ಗಾಳಿಯಿಲ್ಲದೆ ಉಸಿರುಗಟ್ಟುವ ಪರಿಸ್ಥಿತಿ ಇದ್ದುದರಿಂದ ಗಾಬರಿಗೊಂಡ ರೈತ ಸಿದ್ಧಯ್ಯ ತಕ್ಷಣವೇ ಜೆಸಿಬಿ ಯಂತ್ರವನ್ನು ಕರೆಯಿಸಿ ಗ್ರಾಮದ ರವಿಕುಮಾರ್, ರಮೇಶ್, ಮಾರಯ್ಯ, ಬಸವರಾಜು ಮುಂತಾದವರ ಸಹಕಾರದಿಂದ ಹಸುವಿನ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು.

ಸರ್ವೀಸ್ ರಸ್ತೆಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಚರಂಡಿ ಅನಾಹುತಗಳಿಗೆ ಬಾಯ್ತೆರೆದು ನಿಂತಿರುವ ಬಗ್ಗೆ ತಕ್ಷಣವೇ ಕಾಮಗಾರಿ ಪೂರ್ಣಗೊಳಿಸುವಂತೆ ನ್ಯಾಷನಲ್ ಹೈವೆ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹ ಕಿವಿಗೆ ಹಾಕಿಕೊಳ್ಳಲಿಲ್ಲ. ಇಂದು ಮೂಕ ಪ್ರಾಣಿ ಬಿದ್ದು ಅದೃಷ್ಟವಶಾತ್ ಜೀವದಾನ ಪಡೆದಿದೆ. ಇದೇ ಜಾಗದಲ್ಲಿ ವಾಹನಗಳು ಆಯತಪ್ಪಿ ಬಿದ್ದಿದ್ದರೇ ಭಾರಿ ಅನಾಹುತವೇ ಆಗುತ್ತಿತ್ತು ಎಂದು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. ಇನ್ನಾದರೂ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.


Spread the love