
ಎಕ್ಸ್ ಪ್ರೆಸ್ ಹೈವೇನಲ್ಲಿ ಬೈಕ್ ಅವಘಡ: ಮಹಿಳೆ ಸಾವು
ಮಂಡ್ಯ: ಮೈಸೂರಿನಿಂದ ಬೆಂಗಳೂರಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದ ಪರಿಣಾಮ ಮಹಿಳೆ ಸಾವನ್ನಪ್ಪಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೇನಲ್ಲಿ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ನಡೆದಿದೆ.
ಪ್ರಿಯಾಂಕ ರಾಜು(32) ಮೃತಪಟ್ಟ ದುರ್ದೈವಿಯಾಗಿದ್ದರೆ, ಸವಾರ ಲಕ್ಷ್ಮೀನಾರಾಯಣಗೌಡ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಪ್ರಿಯಾಂಕ ರಾಜು ಮತ್ತು ಲಕ್ಷ್ಮಿನಾರಾಯಣಗೌಡ ಬೆಂಗಳೂರಿನ ಟಿಸಿಎಸ್ ಕಂಪನಿಯ ಉದ್ಯೋಗಿಗಳಾಗಿದ್ದು, ಮೈಸೂರಿಗೆ ಬೈಕ್ ನಲ್ಲಿ ಆಗಮಿಸಿ ಇಲ್ಲಿನ ಪ್ರವಾಸಿ ತಾಣಗಳನ್ನು ನೋಡಿಕೊಂಡು ಎಕ್ಸ್ ಪ್ರೆಸ್ ವೇ ನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಬೈಕ್ ಚಾಲನೆ ಮಾಡುತ್ತಿದ್ದ ಸವಾರ ಲಕ್ಷ್ಮಿನಾರಾಯಣಗೌಡರ ನಿಯಂತ್ರಣ ತಪ್ಪಿದ ಬೈಕ್ ಅಪಘಾತಕ್ಕೀಡಾಗಿದೆ. ಪರಿಣಾಮ ಪ್ರಿಯಾಂಕರಾಜು ಸ್ಥಳದಲ್ಲಿಯೇ ಮೃತಪಟ್ಟರೆ, ಸವಾರ ಲಕ್ಷ್ಮಿನಾರಾಯಣಗೌಡರ ಕುತ್ತಿಗೆ ಸೀಳಿ, ಎಡಕೈ ತುಂಡಾಗಿದೆ. ಕೂಡಲೇ ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇಲಿಂದ ಮೇಲೆ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.