
ಎದೆನೋವಿನಿಂದ ಬಳಲುತ್ತಿದ್ದ ಶಾಸಕ ಎನ್ ಮಹೇಶ್ ಚೇತರಿಕೆ
ಮೈಸೂರು: ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದ ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಅವರು ಇದೀಗ ಚೇತರಿಸಿಕೊಂಡಿದ್ದಾರೆ. ಈ ಸಂಬಂಧ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಮಾಜಿ ಸಂಸದ ಆರ್. ಧ್ರುವನಾರಾಯಣ್ ಅವರ ಅಂತಿಮ ದರ್ಶನ ಪಡೆದು ಬಂದ ಬಳಿಕ ಶಾಸಕ ಎನ್.ಮಹೇಶ್ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿತ್ತು ಹೀಗಾಗಿ ಅವರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅವರ ಆರೋಗ್ಯದ ಬಗ್ಗೆ ಅವರ ಬೆಂಬಲಿಗರು ಮತ್ತು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು.
ಆದರೆ ಅವರ ಆರೋಗ್ಯದ ಕುರಿತಂತೆ ಮಾಹಿತಿ ನೀಡಿದ್ದ ವೈದ್ಯರು ಆ್ಯಂಜಿಯೋಗ್ರಾಂ ಮಾಡಲಾಗಿದ್ದು ಗಾಬರಿಯಾಗುವ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಅಲ್ಲದೆ, ಇಸಿಜಿ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿದೆ. ಹೃದಯ ಭಾಗದಲ್ಲಿ ಸ್ವಲ್ಪ ಬ್ಲಾಕ್ ಆಗಿರುವುದು ಗೊತ್ತಾಗಿದ್ದು, ಶನಿವಾರ ಸಂಜೆಯೇ ಅವರಿಗೆ ಆ್ಯಂಜಿಯೋಗ್ರಾಂ ಮಾಡಲಾಗಿದೆ. ಈಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಸೋಮವಾರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಡಾ ಭರತ್ ರೆಡ್ಡಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಗಾಬರಿಯಾಗಬೇಡಿ, ಸ್ನೇಹಿತರೆ, ನಿಮ್ಮೆಲ್ಲರ ಹಾರೈಕೆಯಿಂದ ನಾನು ಆರೋಗ್ಯವಾಗಿದ್ದೇನೆ. ವೈದ್ಯರು ಒಂದು ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಅದರಂತೆ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಯಾರು ಗಾಬರಿಯಾಗಬೇಡಿ, ಹಾಗೂ ಆಸ್ಪತ್ರೆ ಕಡೆ ಯಾರು ಬರಬೇಡಿ. ಎಂದಿನಂತೆ ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿದ್ದಾರೆ.