
ಎನ್ ಇ ಪಿ ಜಾರಿಯ ಹಿಂದೆ ಖಾಸಗೀಕರಣದ ದುರುದ್ದೇಶವಿದೆ – ಎನ್ಎಸ್ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್
ಉಡುಪಿ: ʼಎನ್ಇಪಿ ತರಾತುರಿಯಲ್ಲಿ ಜಾರಿಗೆ ತರುತ್ತಿರುವುದರ ಹಿಂದೆ ಖಾಸಗೀಕರಣದ ದುರುದ್ದೇಶವಿದೆ’ ಎಂದು ಎನ್ಎಸ್ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ಆರೋಪಿಸಿದರು.
ಅವರು ಉಡುಪಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ರಾಷ್ಟ್ರೀಯ ಶಿಕ್ಷಣ ನೀತಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರೀಕರಣಗೊಳಿಸಿ, ಸರಕಿನಂತೆ ಆಗುವುದರಲ್ಲಿ ಅನುಮಾನವಿಲ್ಲ. ಶಿಕ್ಷಣದಿಂದ ಲಾಭ ಮಾಡಿಕೊಳ್ಳುವ ಕಾರ್ಪೊರೇಟ್ ಮನೆತನಗಳಿಗೆ ಒಪ್ಪಿಸುವ ಸಾಧ್ಯತೆ ಹೆಚ್ಚಿದೆ. ಪುಸ್ತಕ ನೀಡುವುದರಿಂದ ಹಿಡಿದು ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸುವ ವಿಶ್ವವಿದ್ಯಾಲಯಗಳ ಅಧಿಕಾರವನ್ನು ಕಿತ್ತುಕೊಳ್ಳಲು ಮುಂದಾಗಿದೆ. ಕಾಲೇಜು ಆಡಳಿತ ಮಂಡಳಿಗೆ ಎಲ್ಲ ಅಧಿಕಾರ ನೀಡಲು ಹೊರಟಿದೆ. ಈ ನೀತಿಯು ಜನವಿರೋಧಿಯಾಗಿದೆ ಎಂದು ಎನ್ಎಸ್ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ದೂರಿದರು.
ಜಾರಿ ಮಾಡುವ ಮೊದಲು ಸಾಧಕ-ಬಾಧಕಗಳ ಬಗ್ಗೆ ಚರ್ಚಿಸದೇ ಏಕಾಏಕಿ ಅನುಷ್ಠಾನಕ್ಕೆ ತರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳೇ ಇರುವುದಿಲ್ಲ ಅದೆಲ್ಲವೂ ಖಾಸಗಿಯಾಗಲಿದ್ದು ವಿದ್ಯಾರ್ಥಿ ವೇತನವನ್ನೇ ನಂಬಿಕೊಂಡು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು, ಕೊರೊನಾ ವಿರುದ್ಧ ಹೋರಾಡುತ್ತಿರುವ ಸಮಯ ದುರುಪಯೋಗ ಮಾಡಿಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೇರಲು ಹೊರಟಿದೆ’. ಎನ್ಇಪಿ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಲು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.
‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದರೆ ರಾಜ್ಯಕ್ಕೆ ಮಾರಕ. ಈ ನೀತಿಯ ಬಗ್ಗೆ ಚರ್ಚೆ, ಸಂಶೋಧನೆ, ಸಂಸತ್, ಸದನದಲ್ಲಿ ಸಾಧಕ ಬಾದಕ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಈ ಚರ್ಚೆಯಾಗದೇ ಈ ನೀತಿ ಜಾರಿಯಾಗುತ್ತಿರುವುದು ದುರಾದೃಷ್ಠಕರವಾದುದು. ಎನ್ಇಪಿಯಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಹಿನ್ನಡೆಯಾಗಲಿದೆ. ಯಾವುದೇ ಶಿಕ್ಷಣ ನೀತಿ ಜಾರಿಗೆ ತರುವಾಗ ಅದಕ್ಕೆ ಮುನ್ನೋಟ, ದೂರದೃಷ್ಟಿ ಇರಬೇಕು, ಈ ಶಿಕ್ಷಣ ನೀತಿ ಅವೈಜ್ಞಾನಿಕವಾದುದು ಎಂದರು.
ಪ್ರಧಾನ ಕಾರ್ಯದರ್ಶಿ ರಫೀಕ್ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ ಮಾಡುವ ಮುನ್ನ ಯಾವುದೇ ರೀತಿಯ ಕುಂದುಕೊರತೆ ಆಲಿಸಿಲ್ಲ. ವಿದ್ಯಾರ್ಥಿ ವೇತನವನ್ನೇ ಅವಲಂಭಿಸಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಲಿದ್ದಾರೆ.ಈ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಎನ್ ಎಸ್ ಯುಐನಿಂದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜನಜಾಗೃತಿ ಮಾಡುತ್ತಿದ್ದೇವೆ.ಶಿಕ್ಷಣವನ್ನು ಖಾಸಗೀಕರಣ,ವ್ಯಾಪಾರೀಕರಣ ಮಾಡಲು ಸರ್ಕಾರ ಹುನ್ನಾರ ನಡೆಸಿದೆ.ಇದರ ವಿರುದ್ದ ಹೋರಾಟ ನಡೆಸಬೇಕಿದೆ. ಇದು ಯಾವುದೇ ರೀತಿಯ ರಾಜಕೀಯ ಪ್ರೇರಿತ ವಿರೋಧವಲ್ಲ. ಈ ನೀತಿಯನ್ನು ತಜ್ಞರ ಸಲಹೆ ಪಡೆದು, ತಪ್ಪುಗಳನ್ನು ಸರಿಪಡಿಸಿ ಜಾರಿಗೊಳಿಸಬೇಕು ಎಂಬುದು ನಮ್ಮ ಆಗ್ರಹ’ ಎಂದರು.
ಎನ್ಎಸ್ಯುಐ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಸೌರಭ್ ಬಲ್ಲಾಳ್ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಜಾಗೃತಿ, ಕರಪತ್ರ ಹಂಚುವ ಮೂಲಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎನ್ ಎಸ್ ಯು ಐ ಜಿಲ್ಲಾ ಉಪಾಧ್ಯಕ್ಷರಾದಮಹಮ್ಮದ್ ಝಮೀರ್, ಸಾಯಿ ಕಿರಣ್, ಪದಾಧಿಕಾರಿಗಳಾದ ಸೈಯ್ಯದ್ ಫುರ್ಕಾನ್, ಸಾರ್ಥಕ್, ರಕ್ಷಿತ್ ರಾಜ್ ಹಾಗೂ ಇತರರು ಉಪಸ್ಥಿತರಿದ್ದರು.