
ಎಪ್ರಿಲ್ ತಿಂಗಳಿನಲ್ಲಿ ನಗರಕ್ಕೆ ಕುಡಿಯುವ ನೀರಿನ ಕೊರತೆ – ಸೂಕ್ತ ಕ್ರಮಕ್ಕೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ
ಉಡುಪಿ: ನಗರಸಭೆಯ ಹಲವು ವಾರ್ಡ್ ಗಳಿಗೆ ಸಮರ್ಪಕ ರೀತಿಯಲ್ಲಿ ನೀರು ಪೊರೈಕೆಯಾಗದ ಕುರಿತು ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಯಿತು.
ನಗರಸಭಾಧ್ಯಕ್ಷೆ ಸುಮೀತ್ರಾ ಆರ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಟಿ ಜೆ ಹೆಗ್ಡೆ ಮೂಡನಿಡಂಬೂರು ವಾರ್ಡಿಗೆ ಒಂದು ವಾರದಿಂದ ನೀರು ಪೊರೈಕೆಯಾಗುತ್ತಿಲ್ಲ ಅಧಿಕಾರಿಗಳಲ್ಲಿ ಕೇಳಿದರೆ ಸೂಕ್ತವಾಗಿ ಸ್ಪಂದನೆ ಇಲ್ಲ ಎಂದರು
ಇದಕ್ಕೆ ಪೂರಕವಾಗಿ ಮಾತನಾಡಿದ ವಿಪಕ್ಷ ನಾಯಕ ರಮೇಶ್ ಕಾಂಚನ್, ಕಳೆದ ಒಂದು ವಾರದಿಂದ ಮಿಷನ್ ಕಂಪೌಂಡಿನ 10 ಮನೆಗಳಿಗೆ ನೀರು ಬರುತ್ತಿಲ್ಲ. ನೀರಿನ ಸಮಸ್ಯೆಗೆ ಸಂಬಂಧಿಸಿ ಮೂರು ತಿಂಗಳ ಕಾಲ ಒಬ್ಬರು ಅಧಿಕಾರಿಗಳ ನೇಮಕ ಮಾಡಬೇಕು ಎಂದರು.
ಕಾರ್ಕಳದಿಂದ ಶಿರೂರು, ಶಿರೂರಿನಿಂದ ಬಜೆಗೆ ಬರುವ ಸ್ವರ್ಣ ನದಿಯ ಒಳ ಹರಿವು ಸ್ಥಗಿತಗೊಂಡಿದೆ. ಎಲ್ಲ ಕಡೆ ಒಳ ಹರಿವು ಜ.25ಕ್ಕೆ ನಿಂತಿದೆ. ಆದರೆ ಕಳೆದ ವರ್ಷ ಮಾ.9ಕ್ಕೆ ಒಳ ಹರಿವು ಸ್ಥಗಿತಗೊಂಡಿತ್ತು, ಅಂದರೆ ಒಂದೂವರೆ ತಿಂಗಳ ಹಿಂದೆಯೇ ಈ ಬಾರಿ ಒಳ ಹರಿವು ನಿಂತಿದೆ. ಆದರೆ ಪ್ರಸ್ತುತ ನೀರಿನ ಸಮಸ್ಯೆ ಇಲ್ಲ. ಆದರೆ ಕಂಟ್ರೋಲ್ ಮಾಡದಿದ್ದರೆ ಎಪ್ರಿಲ್ನಲ್ಲಿಯೇ ನೀರು ಖಾಲಿಯಾಗಬಹುದು ಎಂದು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ ಪ್ರಭು ಹೇಳಿದರು.
ಪೌರಾಯುಕ್ತ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಕಳೆದ ವರ್ಷ ಬಜೆಯಲ್ಲಿ 5.9ಮೀಟರ್ ನೀರಿನ ಸಂಗ್ರಹ ಇದ್ದರೆ, ಈ ವರ್ಷ 6.10 ಮೀಟರ್ ನಷ್ಟು ಇದೆ. ನಾವು ಈಗ ಕೊಡುವ ಪ್ರಕಾರ ನೀರು ಪೂರೈಕೆ ಮಾಡಿದರೆ ಮೇ 16ರವರೆಗೆ ಈ ನೀರಿನ ಸಂಗ್ರಹ ಸಾಕಾಗುತ್ತದೆ. ಕಳೆದ ಒಂದು ವಾರದಿಂದ ಬಿಸಿಲು ಜಾಸ್ತಿಯಾಗಿ ನೀರು ಆವಿಯಾಗುತ್ತಿದೆ. ಇದರಿಂದ ನೀರಿನ ಸಂಗ್ರಹ ಪ್ರಮಾಣ ಕುಸಿಯುತ್ತಿದೆ. ಅದಕ್ಕಾಗಿ ನಿಂಯತ್ರಣ ಮಾಡಲು ಕಳೆದ ಮೂರು ದಿನಗಳಿಂದ ಪ್ರಯತ್ನ ಮಾಡುತ್ತಿದೆ. ಇದರಿಂದ ಕೆಲವು ಎತ್ತರ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಅದನ್ನು ಕೆಲವು ದಿನಗಳಲ್ಲಿ ಸರಿ ಮಾಡುತ್ತೇವೆ ಎಂದು ತಿಳಿಸಿದರು.
ಮಲ್ಪೆಯ ಬೀಚ್ ಬಳಿಯ ಸಾರ್ವಜನಿಕ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೆ ರೂ 10 ಶುಲ್ಕ ಪಡೆಯುತ್ತಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ಚರ್ಚೆಯಾಗುತ್ತಿದ್ದು ಇದಕ್ಕೆ ಸ್ಪಷ್ಟನೆ ನೀಡಬೇಕು ಮತ್ತು ಪ್ರವಾಸಿಗರಿಗೆ ಈ ಪ್ರಮಾಣದ ಶುಲ್ಕವೇಕೆ ಎಂದು ರಮೇಶ್ ಕಾಂಚನ್ ಪ್ರಶ್ನಿಸಿದರು ಇದಕ್ಕೆ ಉತ್ತರಿಸಿದ ಶಾಸಕ ರಘುಪತಿ ಭಟ್, ಮಲ್ಪೆ ಬೀಚ್ ನಲ್ಲಿ ಶೌಚಾಲಯ ನಿರ್ವಹಣೆಯ ಗುತ್ತಿಗೆಯನ್ನು ಮಂತ್ರ ಟೂರಿಸಂ ಡೆವಲಪ್ ಮೆಂಟ್ ಕಂಪನಿಗೆ ವಹಿಸಲಾಗಿದೆ. ಈಗ ಕೇಳಿಬಂದಿರುವ ದೂರಿನ ಬಗ್ಗೆ ಅವರಲ್ಲಿ ಸ್ಪಷ್ಟನೆ ಕೇಳಲಾಗಿದೆ. ಸಾಮಾನ್ಯವಾಗಿ ಇರುವ ನಿಯಮವೇನೆಂದರೆ, ಮೂತ್ರ ವಿಸರ್ಜನೆಗೆ ಯಾವುದೇ ಶುಲ್ಕವಿಲ್ಲ. ಆದರೆ, ಸ್ನಾನಗೃಹಕ್ಕೆ ಮಾತ್ರ 10 ರೂಪಾಯಿ ಶುಲ್ಕವಿದೆ ಎಂದು ಹೇಳಿದರು.
ಉಡುಪಿ ನಗರದ ವೃತ್ತಕ್ಕೆ ಮೊಗವೀರ ಸಮುದಾಯದ ಕುಲಗುರು ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಹೆಸರು ಇಟ್ಟು, ಪುತ್ಥಳಿ ನಿರ್ಮಿಸುವಂತೆ ರಮೇಶ್ ಕಾಂಚನ್ ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕ ರಘುಪತಿ ಭಟ್, ಇದಕ್ಕೆ ಸೂಕ್ತ ವೃತ್ತ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.