
ಎರಡು ದಿನಗಳ ಭೇಟಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಉಡುಪಿಗೆ ಆಗಮನ
ಉಡುಪಿ: ಎರಡು ದಿನಗಳ ಭೇಟಿಗಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸೋಮವಾರ ಸಂಜೆ ಉಡುಪಿ ಜಿಲ್ಲೆಗೆ ಆಗಮಿಸಿದರು.
ಬೆಂಗಳೂರಿಂದ ಹೆಲಿಕಾಪ್ಟರ್ ಮೂಲಕ ಆದಿ ಉಡುಪಿ ಹೆಲಿಪ್ಯಾಡ್ ಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಶಾಸಕ ರಘುಪತಿ ಭಟ್, ಸುಕುಮಾರ್ ಶೆಟ್ಟಿ, ಜೀವರಾಜ್ ಜಿಲ್ಲಾಧಿಕಾರಿ ಜಿ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಹಾಗೂ ಇತರರು ಸ್ವಾಗತಿಸಿದರು.
ಸಂಜೆ 5 ಗಂಟೆಗೆ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಸಿರುವ ಪರ್ಯಾಯದ ಪಂಚ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಂಜೆ 6.30ಕ್ಕೆ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜನವರಿ 19ರಂದು ಬೆಳಿಗ್ಗೆ 9.25 ಕ್ಕೆ ಹೆಜಮಾಡಿ ಕೋಡಿಯಲ್ಲಿನ ಮೀನುಗಾರಿಕೆ ಬಂದರು ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಳಿಗ್ಗೆ 11.30 ಕ್ಕೆ ಕುಂಭಾಸಿ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 1.30 ಕ್ಕೆ ಕುಂದಾಪುರ ನ್ಯೂ ಮೆರಿಡಿಯನ್ ಹೆಲಿಪ್ಯಾಡ್ ಮೂಲಕ ಬೆಂಗಳೂರಿಗೆ ವಾಪಾಸಾಗಲಿದ್ದಾರೆ.