ಎರಡು ವರ್ಷದೊಳಗೆ ಶಾಶ್ವತ ಕುಡಿಯುವ ನೀರು: ಡಾ. ನಾರಾಯಣಗೌಡ

Spread the love

ಎರಡು ವರ್ಷದೊಳಗೆ ಶಾಶ್ವತ ಕುಡಿಯುವ ನೀರು: ಡಾ. ನಾರಾಯಣಗೌಡ

ಮಂಡ್ಯ.: ಮಂಡ್ಯ ಜಿಲ್ಲೆಯ ಮೂರು ತಾಲೂಕಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮುಂದಿನ ಎರಡು ವರ್ಷದೊಳಗೆ ಮುಗಿಯುವುದರೊಂದಿಗೆ ಜನತೆಗೆ ನೀರು ತಲುಪಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

ಜಲ ಜೀವನ್ ಮಿಷನ್ ಯೋಜನೆಯಡಿ ಹಾಗೂ ನಬಾರ್ಡ್ ನೆರವಿನಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆ ಅನು?ನಗೊಳ್ಳಲಿದೆ. ಅಂತೆಯೇ ಈಗ ಯೋಜನೆಗೆ ಆದೇಶ ಹೊರಡಿಸಲಾಗಿದ್ದು, 2023 ರ ರೊಳಗೆ ಪ್ರತಿ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಸಾಕಾರಗೊಳ್ಳಲಿದೆ ಎಂದರು.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ, ಪಾಂಡವಪುರ ಮತ್ತು ನಾಗಮಂಗಲ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯತಿ, ನಾಗಮಂಗಲ ಪಟ್ಟಣ, ಬಿ.ಜಿ. ನಗರ ಮತ್ತು ಕೆ.ಆರ್. ಪೇಟೆ ತಾಲ್ಲೂಕಿನ 5 ವಸತಿ ಶಾಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ರೂ. 690.36 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಈಗ ಮಂಡ್ಯ ಜಿಲ್ಲಾ ಉಸ್ತುವಾರಿ ಡಾ. ನಾರಾಯಣಗೌಡ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಸಂಪುಟದ ಮುಂದಿಟ್ಟು ಒಪ್ಪಿಗೆ ಪಡೆದುಕೊಂಡ ಬಳೀಕ ಸರ್ಕಾರದಿಂದ ಅದೇಶ ಹೊರಡಿಸಲಾಗಿದೆ. ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶಕ್ಕೆ 55 ಎಲ್ ಪಿಸಿಡಿ ಹಾಗೂ ಪಟ್ಟಣ ಪ್ರದೇಶಕ್ಕೆ 135 ಎಲ್ ಪಿಸಿಡಿ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದು ಹೇಳಿದರು.

ಈಗಾಗಲೇ ವಾರದೊಳಗೆ ಟೆಂಡರ್ ಆಹ್ವಾನಿಸಿ, ಮೂರು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಲಾಗುವುದು. 24ತಿಂಗಳೊಳಗಾಗಿ ಯೋಜನೆಯನ್ನು ಪೂರ್ಣಗೊಳಿಸಿ, ಯೋಜನೆಯ ರೂಪು ರೇಷೆಯಂತೆ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಒಟ್ಟು 791 ಹಳ್ಳಿಗಳಿಗೆ ಅನುಕೂಲವಾಗುವಂತೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಕೆ.ಆರ್. ಪೇಟೆ ತಾಲ್ಲೂಕಿನ 310ಕ್ಕೂ ಹೆಚ್ಚು ಹಳ್ಳಿಗಳು, ನಾಗಮಂಗಲ ತಾಲ್ಲೂಕಿನ 391 ಹಳ್ಳಿಗಳು, ಬಿ.ಜಿ.ನಗರ ಹಾಗೂ ಬೆಳ್ಳೂರು ಪಟ್ಟಣ ಪಂಚಾಯತಿ ವ್ಯಾಪ್ತಿ ಹಾಗೂ ಪಾಂಡವಪುರ ತಾಲ್ಲೂಕಿನ 96 ಹಳ್ಳಿಗಳ ಪ್ರತಿ ಮನೆ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು.

ಈ ಯೋಜನೆಯಿಂದ 4 ಲಕ್ಷಕ್ಕೂ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ. ಕೆ.ಆರ್.ಪೇಟೆ ತಾಲ್ಲೂಕಿನ 1,95,112 ಜನರಿಗೆ, ನಾಗಮಂಗಲ ತಾಲ್ಲೂಕಿನ 1,31,221 ಜನರಿಗೆ ಹಾಗೂ ಪಾಂಡವಪುರದ 90,235 ಜನ ಸೇರಿದಂತೆ ಒಟ್ಟು ಪಟ್ಟಣ ಹಾಗೂ ಹಳ್ಳಿ ಸೇರಿ ಒಟ್ಟು 4,16,568 ಜನರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯಿಂದ ಅನುಕೂಲವಾಗಲಿದೆ. ಸುಮಾರು ಒಂದು ದಶಕದ ಬಳಿಕ ಜಿಲ್ಲೆಗೆ ಇಷ್ಟು ದೊಡ್ಡ ಮೊತ್ತದ ಯೋಜನೆ ಮಂಜೂರಾಗಿ, ಆದೇಶವಾಗಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಸಂತಸ ವ್ಯಕ್ತಪಡಿಸಿದ್ದು, ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ, ಎರಡು ವರ್ಷದೊಳಗೆ ಯೋಜನೆ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Spread the love