ಎಲ್ & ಟಿ ಮತ್ತು ಟಾಟಾ ಸಂಸ್ಥೆಗೆ ರಾಮ ಮಂದಿರ ನಿರ್ಮಾಣ ಕಾರ್ಯ ಜವಾಬ್ದಾರಿ – ಪೇಜಾವರ ಸ್ವಾಮೀಜಿ

Spread the love

ಎಲ್ & ಟಿ ಮತ್ತು ಟಾಟಾ ಸಂಸ್ಥೆಗೆ ರಾಮ ಮಂದಿರ ನಿರ್ಮಾಣ ಕಾರ್ಯ ಜವಾಬ್ದಾರಿ – ಪೇಜಾವರ ಸ್ವಾಮೀಜಿ

ಉಡುಪಿ: ಅಯೋಧ್ಯೆ ಭಗವಾನ್ ಶ್ರೀ ರಾಮ ದೇವರ ಭವ್ಯ ಮಂದಿರದ ನಿರ್ಮಾಣ ಕಾರ್ಯವನ್ನು ಎಲ್&ಟಿ ಮತ್ತು ಟಾಟಾ ಸಂಸ್ಥೆಗೆ ಒಪ್ಪಿಸಿರುವುದಾಗಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉತ್ತರ ಭಾರತದ ಪ್ರವಾಸದಲ್ಲಿರುವ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಅಯೋಧ್ಯೆಯಲ್ಲಿ ರವಿವಾರ ನಡೆದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು

ಮಂದಿರ ನಿರ್ಮಾಣ ಕಾರ್ಯದ ಜವಾಬ್ದಾರಿ ಎಲ್ ಅಂಡ್ ಟಿ ಕಂಪನಿಗೆ ವಹಿಸಲಾಗಿದೆ. ಕಾಮಗಾರಿಯ ಮೇಲುಸ್ತುವಾರಿಯನ್ನು ಟಾಟಾ ಕಂಪನಿ ಗೆ ನೀಡಲಾಗಿದೆ. ಈ ಎರಡು ಜವಾಬ್ದಾರಿಯನ್ನು ಎರಡು ಕಂಪನಿಗಳು ಒಪ್ಪಿಕೊಂಡಿದೆ. ರಾಮಮಂದಿರದ ಕಾರ್ಯದರ್ಶಿ ಚಂಪತ್ ರಾಯ್ ಟ್ರಸ್ಟ್ ಕಡೆಯಿಂದ ನಿರ್ಮಾಣ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಹೇಳಿದರು.

ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕುರಿತು ದೇಶದಾದ್ಯಂತ ಅಭಿಯಾನವನ್ನು ಮಕರಸಕ್ರಾಂತಿ ಮರುದಿನ ಜನವರಿ 15 ರಿಂದ 45 ದಿನಗಳ ಕಾಲ ನಡೆಸಲು ಟ್ರಸ್ಟ್ ನಿರ್ಧರಿಸಿದೆ. ಈ 45 ದಿನಗಳ ಅವಧಿಯಲ್ಲಿ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಟ್ರಸ್ಟಿಗಳಾದ ಶ್ರೀಗೋವಿಂದದೇವಗಿರಿ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥಸ್ವಾಮೀಜಿ, ನೃಪೇಂದ್ರ ಮಿಶ್ರಾ, ಚಂಪತ್ ರಾಯ್, ದಿನೇಶ್ ಚಂದ್ರ, ಡಾ| ಅನಿಲ್ ಮಿಶ್ರಾ, ರಾಜವಿಮಲೇಂದ್ರ ಮಿಶ್ರಾ ಮೊದಲಾದವರು ಭಾಗವಹಿಸಿದ್ದರು.

ಪೇಜಾವರ ಸ್ವಾಮೀಜಿ ಸೋಮವಾರ ನೈಮಿಶಾರಣ್ಯ ಬಳಿಕ ಹರಿದ್ವಾರ, ಬದರಿಗೆ ಭೇಟಿ ನೀಡಿ ದಿಲ್ಲಿಗೆ ಹೋಗಲಿದ್ದು, ದಿಲ್ಲಿಯಲ್ಲಿ ನವೆಂಬರ್ 10, 11 ರಂದು ನಡೆಯುವ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿ ವಾಪಾಸಾಗುವರು.


Spread the love