
ಎಸ್ಕಾಂಗಳಲ್ಲಿ ಹಗರಣದ ವಿರುದ್ಧ ಲೋಕಾಯುಕ್ತಕ್ಕೆ ದೂರು: ಎಂ.ಲಕ್ಷ್ಮಣ್
ಮೈಸೂರು: ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ಐಪಿ ಸೆಟ್‌ಗಳಿಗೆ ಮೂಲಸೌಕರ್ಯ ಕಲ್ಪಿಸುವ ಉದ್ದೇಶದ 800 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಹಗರಣ ನಡೆಯುತ್ತಿದ್ದು, ಇದರ ಬಗ್ಗೆ ದಾಖಲೆಗಳೊಂದಿಗೆ ಒಂದು ವಾರದೊಳಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಪಿಟಿ ಕಾಯಿದೆ ಪ್ರಕಾರ ಟೆಂಡರ್ ಸಲ್ಲಿಕೆಗೆ ಒಂದು ತಿಂಗಳು ಅವಕಾಶ ಕೊಡಬೇಕಿತ್ತು. ಆದರೆ, 10 ದಿನಗಳನ್ನು ಮಾತ್ರವೇ ನೀಡಲಾಗಿದೆ. ಈ ಮೂಲಕ ಟೆಂಡರ್ ಮಾನದಂಡವನ್ನೂ ಉಲ್ಲಂಘಿಸಲಾಗಿದೆ. ಚುನಾವಣೆ ಹೊಸ್ತಿಲಲ್ಲಿ, ಅಷ್ಟೊಂದು ತರಾತುರಿಯಲ್ಲಿ ನಡೆಸುತ್ತಿರುವ ಕಾರಣವೇನು ಎನ್ನುವುದು ಎಲ್ಲರಿಗೂ ಗೊತ್ತಾಗುತ್ತದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ, ಸಂಸದ ಪ್ರತಾಪ್ ಸಿಂಹ ಅವರೇ ಏಕೆ ಬಾಯಿ ಬಿಡುತ್ತಿಲ್ಲ. ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಕಾಮಗಾರಿ ಕೈಗೊಡಿರುವ ಅನುಭವ ಪರಿಗಣಿಸದೇ, ವಿತರಕನೂ ಅಥವಾ ಉತ್ಪಾದಕನೂ ಆಗಿರುವವರು ಟೆಂಡರ್‌ನಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಲಾಗಿದೆ. ತಮಗೆ ಬೇಕಾದ ಏಜೆನ್ಸಿಗೆ ಕೊಡಲು ನಿಯಮಾವಳಿಯನ್ನೇ ಬದಲಿಸಿಕೊಳ್ಳಲಾಗಿದೆ. ಸಚಿವರ ಕೃಪಾಕಟಾಕ್ಷದಿಂದಲೇ ಈ ಹಗರಣ ನಡೆದಿರುವುದು ಅನುಮಾನ ಉಂಟಾಗಿದೆ ಎಂದು ದೂರಿದರು.
ಅರ್ಜಿ ಹಾಕುವ ಸಂದರ್ಭದಲ್ಲೇ ಶೇ.5ರಷ್ಟು ಕಮಿಷನ್ ಕೊಡಬೇಕು ಎಂಬ ಮಾಹಿತಿಯನ್ನು ಗುತ್ತಿಗೆದಾರರೊಬ್ಬರು ನನಗೆ ನೀಡಿದ್ದಾರೆ. ಒಟ್ಟು ಶೇ.30ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಅರ್ಜಿ ಸಲ್ಲಿಸುವ ಹಂತದಲ್ಲೇ ಇಂಧನ ಸಚಿವರಿಗೆ ಶೇ.3ರಷ್ಟು ಕಮಿಷನ್ ಅಂದರೆ 24 ಕೋಟಿ ರೂ. ಸಂದಾಯವಾಗಿದೆ. ತಕ್ಷಣವೇ ಈ ಟೆಂಡರ್ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ಎಲ್ಲ ಶಾಸಕರು, ಸಚಿವರ ಮೇಲೆಗಳ ಏಕಕಾಲಕ್ಕೆ ದಾಳಿ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಎಲ್ಲ ಜಿಲ್ಲೆಗಳಲ್ಲೂ ಶೀಘ್ರದಲ್ಲೇ ಪಕ್ಷದಿಂದ ಮನವಿ ಸಲ್ಲಿಸಲಾಗುವುದು. ಈ ದಾಳಿ ನಡೆದರೆ ನಮಗಿರುವ ಮಾಹಿತಿ ಪ್ರಕಾರ, 10 ಸಾವಿರ ಕೋಟಿ ನಗದು ದೊರೆಯುತ್ತದೆ. ವಿಧಾನಸಭೆ ಚುನಾವಣೆಗಾಗಿ ಹಣ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂದು ದೂರಿದರು. ಎಸ್ಕಾಂನಲ್ಲಿ ನಡೆದಿರುವ ಹಗರಣದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಲೋಕಾಯುಕ್ತಕ್ಕೆ ದೂರು ಕೊಡಲಾಗುವುದು ಎಂದರು.