ಎಸ್.ಎಸ್.ಎಲ್.ಸಿ ಪರೀಕ್ಷೆ ಸಮರ್ಪಕವಾಗಿ ನಿರ್ವಹಿಸಿ: ಡಿಸಿ ಎಸ್.ಅಶ್ವತಿ

Spread the love

ಎಸ್.ಎಸ್.ಎಲ್.ಸಿ ಪರೀಕ್ಷೆ ಸಮರ್ಪಕವಾಗಿ ನಿರ್ವಹಿಸಿ: ಡಿಸಿ ಎಸ್.ಅಶ್ವತಿ

ಮಂಡ್ಯ: ಜುಲೈ 19 ಮತ್ತು 22 ರಂದು ನಡೆಯುವ ಎಸ್.ಎಸ್ ಎಲ್.ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಎಸ್.ಅಶ್ವತಿರವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜುಲೈ 2021 ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವ ಸಿದ್ದತೆಯ ಕುರಿತು ಮಾತನಾಡಿದ ಅವರು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಜಿಲ್ಲೆಯ ಒಟ್ಟು 545 ಪ್ರೌಢಶಾಲೆಗಳಿಂದ 11,107 ವಿದ್ಯಾರ್ಥಿಗಳು, 9,609 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 20716 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 100 ರಿಂದ 150 ವಿದ್ಯಾರ್ಥಿಗಳಿಗೆ ಒಂದು ಪರೀಕ್ಷಾ ಕೇಂದ್ರ ರಚಿಸಲಾಗಿದ್ದು, ಪ್ರತಿ ಕೊಠಡಿಗೆ ಗರಿಷ್ಠ 12 ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ನಡುವಿನ ಸಾಮಾಜಿಕ ಅಂತರ 06 ಅಡಿಗಳು ಇರಬೇಕು ಹಾಗೂ ಪ್ರತಿ ವಿದ್ಯಾರ್ಥಿಗೆ ಎನ್-95 ಮಾಸ್ಕ್ ವಿತರಿಸಿ, ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಪರೀಕ್ಷೆಯ ಹಿಂದಿನ ದಿನ ಸ್ಯಾನಿಟೈಸರ್ ವ್ಯವಸ್ಥೆ ಮಾಡಿ ಅಗತ್ಯ ಕ್ರಮವಹಿಸಬೇಕು ಎಂದರು.

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಒಂದು ಕಾಯ್ದಿರಿಸಿದ ಕೊಠಡಿ ಸ್ಥಾಪನೆ. ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ 01 ಡೋಸ್ ವ್ಯಾಕ್ಸಿನೇಷನ್ ಪಡೆದಿರಬೇಕು. ವಲಸೆ ಮಕ್ಕಳಿಗೆ ಅವರು ವಾಸವಿರುವ ಹತ್ತಿರದ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕು. ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಗುರುತಿಸಲಾಗಿದ್ದು, ಒಂದು ವೇಳೆ ಯಾವುದಾದರು ವಿದ್ಯಾರ್ಥಿಗೆ ಪರೀಕ್ಷಾ ಸಂದರ್ಭದಲ್ಲಿ ಪಾಸಿಟೀವ್ ಬಂದಲ್ಲಿ ಸದರಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು. ಜಿಲ್ಲೆಯಾದ್ಯಂತ ಒಟ್ಟು 157 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಮುಖ್ಯ ಅಧೀಕ್ಷಕರನ್ನು ನೇಮಕ ಮಾಡಿದ್ದು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಪರೀಕ್ಷಾ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಒಬ್ಬರು ಉಪಮುಖ್ಯ ಅಧೀಕ್ಷಕರನ್ನು ನೇಮಕ ಮಾಡಿ ಮಂಡಳಿಯ ನಿರ್ದೇಶಕರಿಂದ ಅನುಮೋದನೆ ಪಡೆಯಲಾಗಿದೆ ಎಂದರು.

ಈ ಬಾರಿ ಪ್ರಶ್ನೆಪತ್ರಿಕೆಯನ್ನು ಸಂರಕ್ಷಿಸಿಡಲು ಕಸ್ಟೋಡಿಯನ್ ರವರನ್ನು ನೇಮಕ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಸಾಮಾಜಿಕ ಅಂತರ ಮೇಲ್ವಿಚಾರಣೆಗಾಗಿ ಓರ್ವ ದೈಹಿಕ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ 157 ಪರೀಕ್ಷಾ ಕೇಂದ್ರಗಳಿಗೂ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಇವರು ತಪಾಸಣೆ ಮಾಡಿ ಪರೀಕ್ಷಾ ಕಾರ್ಯದಲ್ಲಿ ಭಾಗಿಯಾಗುವ ಎಲ್ಲಾ ಸಿಬ್ಬಂದಿಗಳ ಮೊಬೈಲ್‍ಗಳನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಮಾತ್ರ ಇಲಾಖಾ ಸಂಪರ್ಕಕ್ಕಾಗಿ ಕೀಪಾಡ್ ಮೊಬೈಲ್‍ನ್ನು ಮಾತ್ರ ಉಪಯೋಗಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಕಲು ತಡೆಯಲು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಇತರೆ ಇಲಾಖೆಯ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಸುಮಾರು 1726 ಶಿಕ್ಷಕರು ಕೊಠಡಿ ಮೇಲ್ವಿಚಾರಕರಾಗಿ ಪರೀಕ್ಷಾ ಕಾರ್ಯ ನಿರ್ವಹಿಸಲಿದ್ದಾರೆ. ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು 46 ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಪ್ರತಿ ಕೇಂದ್ರದಲ್ಲಿ ಒಬ್ಬರು ಸ್ಥಾನಿಕ ಜಾಗೃತದಳದ ಸದಸ್ಯರು ಪಾಳಿ ಪದ್ಥತಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲು ಹಾಗೂ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.

ಮಂಡಳಿಯ ಸಹಾಯವಾಣಿ ಸಂಖ್ಯೆಯನ್ನು ಎಲ್ಲಾ ಶಾಲೆಗಳಲ್ಲೂ ಪ್ರದರ್ಶನ ಮಾಡಿ ಅದರ ಸದುಪಯೋಗ ಪಡೆಯಲು ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳು ಬೆಳಿಗ್ಗೆ 8-30ಕ್ಕೆ ಪರೀಕ್ಷಾ ಕೊಠಡಿಗಳಲ್ಲಿ ಆಸೀನರಾಗಲು ಶಾಲಾ ಮುಖ್ಯಸ್ಥರ ಮೂಲಕ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೈಲಜಾ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವ್ಯಪ್ರಭು, ಅಪರ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್, ಡಿಡಿಪಿಐ ಆರ್.ರಘುನಂದನ್, ಶಿಕ್ಷಣಾಧಿಕಾರಿ ಚಂದ್ರಶೇಖರ್, ನಗರಸಭಾ ಆಯುಕ್ತರಾದ ಎಸ್.ಲೋಕೆಶ್, ಡಯಟ್ ಕಾಲೇಜ್ ಪ್ರಾಂಶುಪಲರಾದ ಶಿವಮಾದಪ್ಪ, ಆರ್.ಸಿ.ಎಚ್.ಅಧಿಕಾರಿ ಸೋಮಶೇಖರ್, ಕೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಕಾಂತ, ಮಹಾದೇವ್, ಕಾಳಿರಯ್ಯ ಹಾಗೂ ಮತ್ತಿತರರ ಉಪಸ್ಥಿತರಿದ್ದರು.


Spread the love