
ಎಸ್ ಎಸ್ ಎಲ್ ಸಿ ಸಾಧಕಿ ಗಾಯತ್ರಿಗೆ ಯಶ್ ಪಾಲ್ ಸುವರ್ಣ ಅಭಿನಂದನೆ
ಉಡುಪಿ: ಶಿಕ್ಷಣಕ್ಕಿಂತ ಇಸ್ಲಾಂ ಮತವೇ ಮುಖ್ಯ ಎಂದು ಜಗ್ಗತ್ತಿಗೆ ಸಾರಿದ್ದ ಕೆಲವು ಹಿಜಾಬ್ ಹೋರಾಟಗಾರ್ತಿಯರಿಗೆ ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನ ಆವರಣದಲ್ಲಿದ್ದ ಪ್ರೌಢಶಾಲೆಯ ಬಾಲಕಿ ಗಾಯತ್ರಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗುವುದರ ಮೂಲಕ ಶಿಕ್ಷಣವೇ ಮುಖ್ಯ ಎಂದು ಸಾಭೀತುಪಡಿಸಿದ್ದಾಳೆ ಎಂದು ಉಡುಪಿ ಬಾಲಕಿಯರ ಸರಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ. ಅವರು ಶನಿವಾರ ವಿದ್ಯಾರ್ಥಿನಿ ಗಾಯತ್ರಿಯನ್ನು ಅಭಿನಂದಿಸಿ ಮಾತನಾಡಿದರು.
ಜೀವನದಲ್ಲಿ ಶಿಕ್ಷಣಕ್ಕೆ ಮಹತ್ವ ಕೊಟ್ಟರೆ ಯಾವುದೇ ಸಮಸ್ಯೆಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ವಿದ್ಯಾರ್ಥಿನಿ ಸಾಕ್ಷಿ. ಶಾಲೆಯ ಕೀರ್ತಿಪತಾಕೆ ಹಾರಿಸಿದ ಹುಡುಗಿಯ ಬಗ್ಗೆ ಆಡಳಿತ ಮಂಡಳಿಗೆ ಹೆಮ್ಮೆಯಿದೆ. ಉಡುಪಿಯ ಈ ಕಾಲೇಜಿಗೆ ವಿಶೇಷ ಮಾನ್ಯತೆ ಇದೆ. ಬಡವರ ಮನೆ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಸರಕಾರೇತರ ಸಹಾಯಗಳನ್ನು ಕೂಡ ಇಲ್ಲಿ ನೀಡಲಾಗುತ್ತದೆ. ಆದರೆ ಎಲ್ಲಾ ಬಣ್ಣ ಮಸಿ ನುಂಗಿತು ಎಂಬ ಗಾದೆ ಮಾತಿನಂತೆ ಹಿಜಾಬ್ ವಿವಾದದ ನಂತರ ಆಡಳಿತ ಮಂಡಳಿ ಮತ್ತು ಶಿಕ್ಷಕರು ಕುಸಿದು ಹೋಗಿದ್ದರು. ಈಗ ಈ ಶಾಲೆಯ ಆಡಳಿತ ಮಂಡಳಿಗೆ ಗಾಯತ್ರಿ ಬೂಸ್ಟರ್ ಡೋಸ್ ಕೊಟ್ಟಿದ್ದಾಳೆ ಎಂದರು. ಗಾಯತ್ರಿ ವಿದ್ಯಾರ್ಥಿನಿ ಹೃದ್ರೋಗ ತಜ್ಞೆಯಾಗಬೇಕೆಂಬ ಆಸೆ ಹೊಂದಿದ್ದಾಳೆ. ಅವಳ ಮುಂದಿನ ಶಿಕ್ಷಣದ ಖರ್ಚನ್ನು ನನ್ನ ವೈಯಕ್ತಿಕ ನೆಲೆಯಲ್ಲಿ ಭರಿಸುತ್ತೇನೆ ಎಂದರು
ಇದೇ ವೇಳೆ ಮಾತನಾಡಿದ ಗಾಯತ್ರಿ 625 ಅಂಕ ದೊರಕುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೆ ರ್ಯಾಂಕ್ ಬರಬೇಕು ಎಂಬ ಆಸೆ ಇತ್ತು. ಪ್ರಯತ್ನ ಮಾಡಿದ್ದೆ, ಪ್ರತಿದಿನ ಮಾಡಿದ ಪಾಠದ ಪಾಯಿಂಟ್ ಮಾಡಿ ಕಲಿಯುತ್ತಿದ್ದೇನು. ನಾನು ಸರಕಾರಿ ಶಾಲೆಯಲ್ಲಿ ಕಲಿತರೂ ಎಲ್ಲ ಸೌಲಭ್ಯ ಇತ್ತು, ಉತ್ತಮ ಗುಣಮಟ್ಟದ ಶಿಕ್ಷಕರು ಇದ್ದಾರೆ. ಕೆಲವರು ಸರಕಾರಿ ಶಾಲೆಯ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿದ್ದಾರೆ.ಅದು ಮೊದಲು ಅವರ ಮನಸ್ಸಿನಿಂದ ಹೋಗಬೇಕು. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿ ಸಿ ಎಮ್ ಬಿ ಕಲಿತು ಹೃದ್ರೋಗ ತಜ್ಞೆಯಾಗಬೇಕೆಂಬ ಆಸೆಯಿದೆ ಎಂದರು.