ಎಸ್.ಸಿ.ಡಿ.ಸಿ.ಸಿ ಗೋಳಿಯಂಗಡಿ ಶಾಖೆಯಲ್ಲಿ ನೂತನ ಎಟಿಎಂ ಕೇಂದ್ರ ಉದ್ಘಾಟನೆ

Spread the love

ಎಸ್.ಸಿ.ಡಿ.ಸಿ.ಸಿ ಗೋಳಿಯಂಗಡಿ ಶಾಖೆಯಲ್ಲಿ ನೂತನ ಎಟಿಎಂ ಕೇಂದ್ರ ಉದ್ಘಾಟನೆ

ಕುಂದಾಪುರ: 2007 ರಲ್ಲಿ ಆರಂಭಗೊಂಡ ಎಸ್ಸಿಡಿಸಿಸಿ ಗೋಳಿಯಂಗಡಿ ಶಾಖೆಯು ಅಂದಿನಿಂದ ಇಂದಿನ ತನಕವೂ ಗ್ರಾಮೀಣ ಭಾಗದ ಜನರಿಗೆ ಸೇವೆ ನೀಡುವುದರ ಜೊತೆಗೆ ನವೋದಯ ಸ್ವ-ಸಹಾಯ ಸಂಘಗಳನ್ನು ಅಭಿವೃದ್ದಿಪಡಿಸುತ್ತಾ ಈ ಮಟ್ಟಕ್ಕೆ ಬೆಳೆದಿದೆ. 54 ಕೋಟಿ ರೂ. ಠೇವಣಿಯಲ್ಲಿ 58 ಕೋಟಿ ರೂ. ಸಾಲ ನೀಡಿದ್ದು, ಜನರು ಕೊಟ್ಟಿರುವ ಹಣಕ್ಕಿಂತ ಹೆಚ್ಚು ಸಾಲ ನೀಡಿರುವ ಹೆಗ್ಗಳಿಕೆ ಗೋಳಿಯಂಗಡಿ ಶಾಖೆಗಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.

ಸೋಮವಾರ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ ಗೋಳಿಯಂಗಡಿ ಶಾಖಾ ಕಟ್ಟಡದಲ್ಲಿ ಜರುಗಿದ ನೂತನ ಎಟಿಎಂ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಲಾಭದ ದೃಷ್ಠಿ ಇಟ್ಟುಕೊಂಡು ನಾವು ಕೃಷಿ ಸಾಲ ನೀಡುತ್ತಿಲ್ಲ. ರೈತರ ಬದುಕು ಹಸನಾಗಬೇಕು ಎನ್ನುವ ಸದುದ್ದೇಶದಿಂದ ಕೃಷಿ ಸಾಲವನ್ನು ಸರ್ಕಾರದ 3 ಲಕ್ಷದವರೆಗಿನ ಬೆಳೆ ಸಾಲ, ಶೇಕಡಾ 3ರಷ್ಟು ಬಡ್ಡಿ ದರದಲ್ಲಿ 10 ಲಕ್ಷದವರೆಗಿನ ಮಧ್ಯಮಾವಧಿ ಸಾಲವನ್ನು ವಿತರಣೆ ಮಾಡುತ್ತಾ ಬಂದಿದ್ದೇವೆ. ಬೆಳೆ ಸಾಲ, ಮಧ್ಯಮಾವಧಿ ಸಾಲದ ಬಡ್ಡಿ ಸರ್ಕಾರದಿಂದ ಬರುವಾಗ 2 ವರ್ಷ ದಾಟುತ್ತದೆ. ಆದರೂ ನಾವು ರೈತರ ನೆರವಿಗೆ ನಿಂತಿದ್ದೇವೆ. ಅವಿಭಜಿತ ದ.ಕ ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸೌಲಭ್ಯ ಸಿಕ್ಕಿಲ್ಲ ಎಂದು ರೈತರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ನಾವು ನಿಸ್ವಾರ್ಥವಾಗಿ ಜನರ ಸೇವೆ ಮಾಡುತ್ತಿದ್ದು ಸದೃಢವಾಗಿದ್ದೇವೆ. ಹೀಗಾಗಿ ಜನರು ನಮ್ಮಲ್ಲಿ ವಿಶ್ವಾಸವಿಟ್ಟು ಅವರ ಹಣವನ್ನು ಠೇವಣಾತಿ ರೂಪದಲ್ಲಿ ಇರಿಸುತ್ತಿದ್ದಾರೆ ಎಂದರು.

ಸಂಸ್ಕೃತಿ ಅರಿತವರು ನಮ್ಮ ಸಿಬ್ಬಂದಿಗಳು!:
ನಮ್ಮ ಜಿಲ್ಲೆ ಬ್ಯಾಂಕುಗಳ ತವರೂರು. ಅವಿಭಜಿತ ದ.ಕ ಜಿಲ್ಲೆಯಲ್ಲಿ ಹಲವಾರು ಬ್ಯಾಂಕ್ಗಳು ಉದಯವಾಗಿದೆೆ. ಬ್ಯಾಂಕ್ಗಳ ವಿಲೀನದಿಂದಾಗಿ ಕೆಲವು ಬ್ಯಾಂಕ್ಗಳ ಹೆಸರುಗಳೇ ಇಂದು ಕಣ್ಮರೆಯಾಗಿದೆ. ಬ್ಯಾಂಕ್ ವಿಲೀನದ ಬಳಿಕ ಭಾಷೆ ಬಾರದ, ನಮ್ಮ ಸಂಸ್ಕೃತಿಯ ಅರಿವಿರದ ಸಿಬ್ಬಂದಿಗಳನ್ನು ಕಾಣುತ್ತಿದ್ದೇವೆ. ಆದರೆ ನಾವು ಹಾಗಲ್ಲ. ಹೆಚ್ಚೆಚ್ಚು ಶಾಖೆಗಳನ್ನು ತೆರೆದು ನಮ್ಮವರನ್ನೇ, ನಮ್ಮ ಸಂಸ್ಕೃತಿ ಅರಿತವರನ್ನೇ ಸಿಬ್ಬಂದಿಗಳಾಗಿ ನೇಮಕ ಮಾಡಿ ಗ್ರಾಹಕರ ಸೇವೆಗೆ ಬಿಟ್ಟಿದ್ದೇವೆ ಎಂದರು.

ನೂತನ ಎಟಿಎಂ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಎಸ್ಸಿಡಿಸಿಸಿ ಬ್ಯಾಂಕ್ ಇಂದು ಇಷ್ಟರ ಮಟ್ಟಿಗೆ ಗ್ರಾಮೀಣ ಭಾಗದ ಜನರಿಗೆ ಸೇವೆ ನೀಡಿದೆ ಎಂದರೆ ಅದಕ್ಕೆ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರು ಕಾರಣ. ಅವರು ಎಸ್ಸಿಡಿಸಿಸಿ ಬ್ಯಾಂಕ್ನ ಚುಕ್ಕಾಣಿ ಹಿಡಿದ ಬಳಿಕ ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಕ್ರಾಂತಿ ಮಾಡಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಎಸ್ಸಿಡಿಸಿಸಿ ಬ್ಯಾಂಕ್ ಪಡೆದುಕೊಂಡಿದೆ. ಯಾವುದೇ ಪ್ರಶಸ್ತಿಗಳು ಸುಖಾಸುಮ್ಮನೆ ಬರುವುದಿಲ್ಲ. ಇದರ ಹಿಂದೆ ರಾಜೇಂದ್ರ ಕುಮಾರ್ ಹಾಗೂ ಅವರ ತಂಡದ ಸಾಕಷ್ಟು ಪರಿಶ್ರಮವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್ ಜಯರಾಮ್ ಶೆಟ್ಟಿ, ಬೆಳ್ವೆ ಗ್ರಾ.ಪಂ ಅಧ್ಯಕ್ಷೆ ರಾಧಾ, ಕಟ್ಟಡ ಮಾಲೀಕರಾದ ನಾಗರಾಜ್ ಭಟ್ ಉಪಸ್ಥಿತರಿದ್ದರು.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್, ಕುಂದಾಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಟ್ಟಡ ಮಾಲೀಕರಾದ ನಾಗರಾಜ್ ಭಟ್ ಅವರನ್ನು ಸನ್ಮಾನಿಸಲಾಯಿತು.

ಠೇವಣಿ ಪತ್ರ, ಗೃಹ ನಿರ್ಮಾಣ ಸಾಲ ಪತ್ರ, ವಾಹನ ಖರೀದಿ ಸಾಲ ಪತ್ರಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ನೂತನ ಸ್ವ-ಸಹಾಯ ಗುಂಪುಗಳನ್ನು ಉದ್ಘಾಟಿಸಲಾಗಿದ್ದು, ಗುಂಪಿನ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಪುಸ್ತಕ ವಿತರಿಸುವ ಜೊತೆಗೆ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಸುಮಾರು ೧ ಕೋಟಿ ರೂ.ನಷ್ಟು ಸಾಲ ವಿತರಿಸಲಾಯಿತು.

ಎಸ್ಸಿಡಿಸಿಸಿ ಬ್ಯಾಂಕ್ನ ನಿರ್ದೇಶಕರಾದ ಮೊಳಹಳ್ಳಿ ಮಹೇಶ್ ಹೆಗ್ಡೆ ಪ್ರಸ್ತಾಪಿಸಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ ಧನ್ಯವಾದ ಸಮರ್ಪಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.


Spread the love

Leave a Reply

Please enter your comment!
Please enter your name here