ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿಂದ ಉಡುಪಿ ಪೊಲೀಸ್ ಇಲಾಖೆಗೆ ಹೊಸ ಜೀಪ್ ಹಸ್ತಾಂತರ
ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಡುಪಿ ಜಿಲ್ಲಾ ಪೊಲೀಸರಿಗೆ ಬೋಲೇರೋ ವಾಹನವನ್ನು ಕೊಡುಗೆಯಾಗಿ ಹಸ್ತಾಂತರ ಮಾಡಿತು.

ಶನಿವಾರ ಉಡುಪಿ ಎಸ್ಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ ನ ಅಧ್ಯಕ್ಷರಾದ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಹೊಸ ವಾಹನಕ್ಕೆ ಹಸಿರು ನಿಶಾನೆ ತೋರಿ, ಎಸ್ ಪಿ ಹರಿರಾಮ್ ಶಂಕರ್ ಅವರಿಗೆ ಕೀಲಿ ಕೈ ಹಸ್ತಾಂತರ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಪೊಲೀಸ್ ಇಲಾಖೆ ಹಲವಾರು ವಾಹನಗಳು 15 ವರ್ಷವನ್ನು ಪೂರೈಸಿದ್ದು, ಕೆಲ ವಾಹನಗಳು ದುರಸ್ತಿಯಲ್ಲಿ ಇರುವುದರಿಂದ ಇಲಾಖೆಗೆ ಕರ್ತವ್ಯ ನಿರ್ವಹಿಸಲು ಸಮಸ್ಯೆ ಆಗುತ್ತಿತ್ತು. ಎಸ್ ಸಿಡಿಸಿಸಿ ಬ್ಯಾಂಕ್ ಸಿಎಸ್ಆರ್ ಫಂಡ್ ಮೂಲಕ ವಾಹನ ಒದಗಿಸಲು ಇಲಾಖೆ ಮನವಿ ಸಲ್ಲಿಸಿತ್ತು. ನಮ್ಮ ಮನವಿಗೆ ಸ್ಪಂದಿಸಿ ಇಂದು ಅವರು ಇಲಾಖೆಗೆ ಬೊಲೆರೋ ವಾಹನವನ್ನು ನೀಡಿರುತ್ತಾರೆ ಅವರ ಉದಾರ ದೇಣಿಗೆಗೆ ಜಿಲ್ಲಾ ಪೊಲೀಸ್ ಇಲಾಖೆ ಧನ್ಯವಾದ ಸಲ್ಲಿಸುತ್ತದೆ ಎಂದರು.
ಇದೇ ವೇಳೆ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಬ್ಯಾಂಕ್ ನ ಅಧ್ಯಕ್ಷರಾದ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಬ್ಯಾಂಕಿನ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಬ್ಯಾಂಕ್ ನ ಅಧ್ಯಕ್ಷರಾದ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಂ ಎನ್ ರಾಜೇಂದ್ರಕುಮಾರ್, ರಾಜ್ಯ ಸರ್ಕಾರದ ಇಲಾಖೆಗಳಲ್ಲೇ ಪೊಲೀಸ್ ಇಲಾಖೆ ಬಹಳಷ್ಟು ಸವಾಲುಗಳನ್ನು ಎದುರಿಸಿಕೊಂಡು ಕೆಲಸ ಮಾಡುತ್ತದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸ್ ಇಲಾಖೆಯ ದೊಡ್ಡ ಜವಾಬ್ದಾರಿ. ಮನವಿ ಬಂದಾಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ನಮ್ಮ ಬ್ಯಾಂಕ್ ಸ್ಪಂದಿಸಿ ವಾಹನವನ್ನು ಒದಗಿಸಿದೆ. ಉಡುಪಿಯ ಮನವಿಯನ್ನು ಬಹಳ ಸಂತಸದಿಂದ ನಾವು ಒಪ್ಪಿಕೊಂಡೆವು ಎಂದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಡಾ|ಬೆಳಪು ದೇವಿಪ್ರಸಾದ್ ಶೆಟ್ಟಿ, ಉಡುಪಿ ಡಿವೈಎಸ್ಪಿ ಪ್ರಭು ಡಿಟಿ, ಬ್ಯಾಂಕಿನ ನಿರ್ದೇಶಕರು, ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿ ಉಪಸ್ಥಿತರಿದ್ದರು.