ಎ.ಜಿ ಕೊಡ್ಗಿ ಅವರ ಹೆಸರಿನಲ್ಲಿ ಭವನ ನಿರ್ಮಾಣವಾಗಬೇಕು : ಸಚಿವೆ ಶೋಭಾ ಕರಂದ್ಲಾಜೆ 

Spread the love

ಎ.ಜಿ ಕೊಡ್ಗಿ ಅವರ ಹೆಸರಿನಲ್ಲಿ ಭವನ ನಿರ್ಮಾಣವಾಗಬೇಕು : ಸಚಿವೆ ಶೋಭಾ ಕರಂದ್ಲಾಜೆ 

ಕುಂದಾಪುರ: ಮೂಲಭೂತ ಸೌಕರ್ಯಗಳು ವಂಚಿತವಾಗಿದ್ದ ಅಮಾಸೆಬೈಲು ಎನ್ನುವ ಮಲೆನಾಡು ಭಾಗದ ಗ್ರಾಮವನ್ನು ದೇಶವೇ ದೃಷ್ಟಿಸಿ ನೋಡುವಂತೆ ಅಭಿವೃದ್ಧಿ ಪಡಿಸಿದ್ದ ಮಾಜಿ ಶಾಸಕ ಎ.ಜಿ.ಕೊಡ್ಗಿಯವರ ಚಿಂತನೆ, ಪ್ರಾಮಾಣಿಕತೆ, ಬದ್ಧತೆ, ನಡೆ-ನುಡಿ ಇಂದಿನ ಯುವಕರಿಗೆ ದಾರಿದೀಪವಾಗಬೇಕು. ಈ ನಿಟ್ಟಿನಲ್ಲಿ ಅಮಾಸೆಬೈಲಿನಲ್ಲಿ ಅವರ ಹೆಸರಿನಲ್ಲಿ ಸಾಂಸ್ಕೃತಿಕ ಭವನದ ನಿರ್ಮಾಣವಾಗಬೇಕು ಎಂದು ಕೇಂದ್ರ ಸರ್ಕಾರದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅಮಾಸೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎ.ಜಿ.ಕೊಡ್ಗಿ ಬಯಲು ರಂಗ ಮಂಟಪದಲ್ಲಿ ದಿ.ಎ.ಜಿ.ಕೊಡ್ಗಿಯವರ ೯೪ನೇ ಹುಟ್ಟು ಹಬ್ಬದ ಪ್ರಯುಕ್ತ ಶನಿವಾರ ಎ.ಜಿ.ಕೊಡ್ಗಿ ಅಭಿಮಾನಿಗಳು ಹಾಗೂ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಜೊತೆಯಾಗಿ ಆಯೋಜಿಸಿದ ಕೊಡ್ಗಿ ನೆನಪು ಕಾರ್ಯಕ್ರಮ ಉದ್ಘಾಟಿಸಿ, ಕೊಡ್ಗಿ ಅವರ ಭಾವಚಿತ್ರಕ್ಕೆ ಪುಷ್ಬನಮನ ಸಲ್ಲಿಸಿ ಅವರು ಮಾತಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನಾಡು ಕಂಡ ಹಿರಿಯ ಮುತ್ಸದ್ಧಿ ಹಾಗೂ ಚಿಂತಕ ಎ.ಜಿ.ಕೊಡ್ಗಿಯವರು ಮರೆಯಾದರು ಅವರು ನಡೆದು ಬಂದ ದಾರಿ, ಅವರು ಸೇವೆ ಸಲ್ಲಿಸಿದ ಕ್ಷೇತ್ರಗಳು, ಅವರ ಚಿಂತನೆಗಳು ಹಾಗೂ ಅವರು ಮಾಡಿದ ಕೆಲಸಗಳು ಜನಮಾನಸದಲ್ಲಿ ಉಳಿಯಬೇಕು ಎನ್ನುವ ಕಾರಣದಿಂದ ಸಮಾನಮನಸ್ಕ ಕೊಡ್ಗಿ ಅಭಿಮಾನಿಗಳು ಒಟ್ಟು ಸೇರಿ ಕೊಡ್ಗಿ ನೆನಪು ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಕೊಡ್ಗಿಯವರ ಹೆಸರು ಚಿರಸ್ಥಾಯಿನ್ನಾಗಿಸಲು ಏನೇನು ಮಾಡಬೇಕು ಎನ್ನುವ ಬಗ್ಗೆ ಸಾರ್ವಜನಿಕ ಚಿಂತನೆಗಳು ನಡೆದು, ಅಭಿಪ್ರಾಯಗಳ ಕ್ರೋಢಿಕರಣ ಮಾಡಿ ಶಾಶ್ವತವಾದ ಯೋಜನೆ ರೂಪಿಸಲು ಪ್ರಯತ್ನಿಸಲಾಗುವುದು ಎಂದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಎ.ಜಿ.ಕೊಡ್ಗಿ ಎಂದು ಮುಖ ನೋಡಿ ರಾಜಕಾರಣ ಮಾಡಿದವರಲ್ಲ. ನೇರ ಹಾಗೂ ನಿಷ್ಠುರವಾದಿಯಾಗಿದ್ದ ಅವರು ನನ್ನನ್ನು ಸೇರಿ ಅನೇಕರಿಗೆ ಮಾರ್ಗದರ್ಶನ ಮಾಡಿದ್ದ ಧೀಮಂತರು. ಅಮಾಸೆಬೈಲಿನಲ್ಲಿ ಪಂಚಾಯತ್ ರಾಜ್‌ ಇಲಾಖೆಯ ತರಬೇತಿ ಕೇಂದ್ರವನ್ನು ಆರಂಭಿಸುವ ಮೂಲಕ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಬಗ್ಗೆ ಅವರಿದ್ದ ಅಪಾರವಾದ ಜ್ಞಾನವನ್ನು ಗೌರವಿಸುವ ಕೆಲಸ ಸರ್ಕಾರದಿಂದ ನಡೆಯಬೇಕು. ಕುಮ್ಕಿ ಹಕ್ಕನ್ನು ನೀಡುವ ಕುರಿತು ಕಳೆದ ಹಲವು ವರ್ಷಗಳಿಂದ ಇರುವ ಗೊಂದಲದ ನಿವಾರಣೆಗೆ ಸರ್ಕಾರ ಇಚ್ಚಾಶಕ್ತಿ ತೋರಬೇಕಾದ ಅಗತ್ಯ ಇದೆ. ವ್ಯಕ್ತಿಗೆ ಕುಮ್ಕಿ ಹಕ್ಕು ನೀಡಿದಲ್ಲಿ ಅದರ ಮೂಲ ಉದ್ದೇಶಗಳು ಬದಲಾಗುವ ಸಾಧ್ಯತೆ ಇರುವುದರಿಂದ, ಮಾರಾಟ ಮಾಡಲು ಅವಕಾಶ ಇಲ್ಲದಂತೆ ಭೂಮಿಗೆ ಹಾಗೂ ಕೃಷಿ ಹಾಗೂ ಅರಣ್ಯ ಚಟುವಟಿಕೆಗೆ ಸೀಮಿತವಾಗುವಂತೆ ಹಕ್ಕು ನೀಡುವ ಕುರಿತು ಚಿಂತನೆ ನಡೆಯಬೇಕು. ೫೦-೬೦ ವರ್ಷಗಳಿಗಿಂತ ಹೆಚ್ಚು ಕಾಲ ಸರ್ಕಾರದ ಗೇರು ಭೂಮಿಯನ್ನು ಜೋಪಾನ ಮಾಡಿ ಕಾಯ್ದುಕೊಂಡವರಿಗೂ, ಸಾಮಾಜಿಕ ನ್ಯಾಯ ನೀಡುವ ಕೆಲಸ ಸರ್ಕಾರದಿಂದ ಆಗಬೇಕು. ಕೃಷಿಕರಿಗೆ ಅನುಕೂಲವಾಗುವ ಸಾಮಾನ್ಯ ಬೆಲೆಯಲ್ಲಿ ಗೇರು ಲೀಸ್ ಹೊಂದಿರುವವರಿಗೆ ಭೂಮಿ ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಲಿ ಎಂದು ಹೇಳಿದ ಅವರು, ಕೊಡ್ಗಿಯವರು ಬದುಕಿದ್ದ ದಿನಗಳಲ್ಲಿ ಈ ಕುರಿತು ಪ್ರಾಮಾಣಿಕ ಹೋರಾಟ ಮಾಡಿದ್ದರು ಎನ್ನುವುದನ್ನು ನೆನಪಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಅಮಾಸೆಬೈಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಕರ್ಣಾಟಕ ಬ್ಯಾಂಕ್ ಕೊಡುಗೆಯಾಗಿ ನೀಡಿದ ಬಸ್ಸಿನ ನಿರ್ವಹಣೆಗಾಗಿ ಎ.ಜಿ.ಕೊಡ್ಗಿ ಕುಟಂಬಿಕರು ನೀಡಿದ ಸಹಾಯಧನದ ಚೆಕ್ ಹಸ್ತಾಂತರಿಸಿದರು.ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಲ್‌.ಎಚ್.ಮಂಜುನಾಥ್, ಕರ್ಣಾಟಕ ಬ್ಯಾಂಕಿನ ಮಾರಾಟ ವಿಭಾಗದ ಹಿರಿಯ ಆಧಿಕಾರಿ ಗೋಕುಲದಾಸ್, ಅಮಾಸೆಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸ್ಥಳೀಯ ಪ್ರಮುಖರಾದ ಬಿ.ಕೆ. ನರಸಿಂಹ ಶೆಟ್ಟಿ ಇದ್ದರು.

ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎ.ಅಶೋಕಕುಮಾರ ಕೊಡ್ಗಿ ಸ್ವಾಗತಿಸಿದರು, ರಾಜೇಶ್ ಕುಂದಾಪುರ ನಿರೂಪಿಸಿದರು, ಪತ್ರಕರ್ತ ಯು.ಎಸ್. ಶೆಣೈ ವಂದಿಸಿದರು


Spread the love